1950ರ ದಶಕದಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುಜರಾತ್‌ ಬುಡಕಟ್ಟು ಪ್ರದೇಶ ಬಿಜೆಪಿ ತೆಕ್ಕೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಗುಜರಾತ್‌ನಲ್ಲಿ ಐತಿಹಾಸಿಕ ಗೆಲುವಿನತ್ತ ಸಾಗುತ್ತಿರುವ ಬಿಜೆಪಿ, ಕಾಂಗ್ರೆಸ್ ಪ್ರಾಬಲ್ಯವಿರುವ ಬುಡಕಟ್ಟು ವಲಯದ ಬಹುತೇಕ ಎಲ್ಲ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವತ್ತ ಮುನ್ನುಗ್ಗುತ್ತಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ ನ ಇದುವರೆಗಿನ ಅತ್ಯಂತ ಕಳಪೆ ಪ್ರದರ್ಶನವಾಗಿದೆ.
ರಾಜ್ಯದಲ್ಲಿ ಯಾವಾಗಲೂ ಬಡವರು ಮತ್ತು ಹಿಂದುಳಿದವರ ವರ್ಗಗಳಲ್ಲಿ ತನ್ನ ದೊಡ್ಡ ಮತದಾರರ ಗುಂಪನ್ನು ಹೊಂದಿದ್ದ ಕಾಂಗ್ರೆಸ್, 1950 ರ ದಶಕದಿಂದಲೂ ಬುಡಕಟ್ಟು ವಲಯದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಇಷ್ಟೊಂದು ಅಬ್ಬರ ಮಾಡುತ್ತಿದೆ.
ಗುಜರಾತ್‌ನ ಬುಡಕಟ್ಟು ಬೆಲ್ಟ್ 27 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  2011 ರ ಜನಗಣತಿಯ ಮಾಹಿತಿಯ ಪ್ರಕಾರ ಗುಜರಾತಿನ ಬುಡಕಟ್ಟು ಜನಸಂಖ್ಯೆ 89.17 ಲಕ್ಷ. ಇದು ಗುಜರಾತಿನ ಒಟ್ಟು ಜನಸಂಖ್ಯೆಯ 15 ಪ್ರತಿಶತದಷ್ಟಿದೆ. ಈ ಸಮುದಾಯವು ರಾಜ್ಯದ 14 ಪೂರ್ವ ಜಿಲ್ಲೆಗಳಲ್ಲಿ ಹೆಚ್ಚಾಗಿ ಹರಡಿಕೊಂಡಿದೆ.
ಈ ಬಾರಿ ರಾಜ್ಯದಲ್ಲಿ ಅತ್ಯಂತ ಕನಿಷ್ಟ ಮಟ್ಟದ ಪ್ರಚಾರ ನಡೆಸಿದ ಕಾಂಗ್ರೆಸ್, ಕ್ಷೇತ್ರದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಕಡಿಮೆ ಮಾಡಿತ್ತು. 2017 ರಲ್ಲಿ ಇಲ್ಲಿನ 27 ಸ್ಥಾನಗಳಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 8 ಸ್ಥಾನಗಳನ್ನು ಗಳಿಸಿತ್ತು.
ಆದರೆ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಬುಡಕಟ್ಟು ಸಮುದಾಯದ ದೊಡ್ಡ ನಾಯಕ ಮತ್ತು ಈ ಪ್ರದೇಶದ 10 ಬಾರಿಯ ಕಾಂಗ್ರೆಸ್ ಶಾಸಕ ಮೋಹನ್‌ಸಿನ್ಹಾ ರಥಾವ ಅವರು ಗೇಮ್ ಚೇಂಜರ್ ಎನಿಸಿಕೊಂಡಿದ್ದಾರೆ. ವೈದ್ಯಕೀಯ ಕಾರಣಕ್ಕಾಗಿ ರಥಾವ ಅವರು ಈ ಬಾರಿ ಸ್ಪರ್ಧಿಸಿರಲಿಲ್ಲ. ಅದರೆ ಅವರ ಮಗ ರಾಜುಭಾಯಿ ರಾಥಾವ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು.
ಬಿಜೆಪಿ ಕೂಡ ಬುಡಕಟ್ಟು ಜನಾಂಗದ ಮೇಲೆ ಹೆಚ್ಚು ಗಮನ ಹರಿಸಿದೆ. ಚುನಾವಣೆಯ ಪೂರ್ವದಲ್ಲಿ, ಪಕ್ಷವು ತನ್ನ ಗುಜರಾತ್ ಗೌರವ್ ಯಾತ್ರೆಯ ಒಂದು ಪಾದವನ್ನು ಆ ಪ್ರದೇಶದಲ್ಲಿ ಆಯೋಜಿಸಿತು. ಸದ್ಯ ನವಸಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಿಂದ ಮುನ್ನಡೆ ಸಾಧಿಸಿದೆ.
ಗುಜರಾತ್‌ನಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ದಾಖಲೆಯ ಗೆಲುವಿನತ್ತ ಸಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೂ ರಾಜ್ಯದಲ್ಲಿ ಖಾತೆ ತೆರೆಯುವ ಸಾಧ್ಯತೆಯಿದ್ದು, ಸದ್ಯ 10ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!