ಹೊಸದಿಗಂತ ವರದಿ ಅಂಕೋಲಾ:
ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೇಶದ ಪಶ್ಚಿಮ ಕರಾವಳಿಯ ಗುಜರಾತ್ ನಿಂದ ತಮಿಳುನಾಡಿನ ಕನ್ಯಾಕುಮಾರಿ ವರೆಗೆ ಸಂಚರಿಸಲಿರುವ ಸೈಕ್ಲೋಥಾನ್ 2025 ಜಾಥಾಕ್ಕೆ ತಾಲೂಕಿನ ಅವರ್ಸಾದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕರ ನೇತೃತ್ವದಲ್ಲಿ ಭಾರತ ಮಾತೆಗೆ ಜಯಕಾರ ಕೂಗಿ ಸೈಕಲ್ ಸವಾರ ರಕ್ಷಣಾ ಯೋಧರಿಗೆ ಪುಷ್ಪವೃಷ್ಟಿಯೊಂದಿಗೆ ಆರತಿ ಬೆಳಗಿ, ಹಣೆಗೆ ತಿಲಕವನ್ನಿಟ್ಟು, ಶಾಲು ಹೊದಿಸಿ ಸ್ವಾಗತ ಕೋರಲಾಯಿತು.
ಸಿ.ಐ.ಎಸ್. ಎಫ್ ನ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಅಧಿಕಾರಿಗಳು ಸೈಕ್ಲೋಥಾನ್ ಜಾಥಾದಲ್ಲಿ ಪಾಲ್ಗೊಂಡಿದ್ದು ಅವರಿಗೆ ರೂಪಾಲಿ ನಾಯ್ಕ ಅವರ್ಸಾದಲ್ಲಿ ಬೆಳಿಗ್ಗಿನ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಅವರ್ಸಾಕ್ಕೆ ಆಗಮಿಸಿ ಸಿ.ಐ.ಎಸ್.ಎಫ್ ಸೈಕ್ಲೋಥಾನ್ ಜಾಥಾಕ್ಕೆ ಪುಷ್ಪಗುಚ್ಛ ನೀಡಿ ಸರ್ಕಾರದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರಕ್ಕೆ ಸ್ವಾಗತ ಕೋರಿದರು.
ಸೈಕ್ಲೋಥಾನ್ ಜಾಥಾಗೆ ಸಂಬಂಧಿಸಿದಂತೆ ಸಚಿವ ಮಂಕಾಳ ವೈದ್ಯ ಮತ್ತು ರೂಪಾಲಿ ನಾಯ್ಕರಿಗೆ ಸಿ.ಐ.ಎಸ್.ಎಫ್ ವತಿಯಿಂದ ಕ್ಯಾಪ್ ಮತ್ತು ಜೆರ್ಸಿ ನೀಡಿ ಗೌರವಿಸಲಾಯಿತು.ಜಾಥಾ ಕುರಿತಂತೆ ಕೇಂದ್ರೀಯ ರಕ್ಷಣಾ ಸುರಕ್ಷಾ ಪಡೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ವೈದ್ಯ ಸೈಕ್ಲೋಥಾನ್ ರಕ್ಷಣಾ ಸಿಬ್ಬಂದಿಗಳೊಂದಿಗೆ ಕುಳಿತು ಉಪಹಾರ ಸ್ವೀಕರಿಸಿದರು.
ಭಾರತೀಯ ಜನತಾ ಪಕ್ಷದ ಹಿರಿಯ ಪ್ರಮುಖ ಸಾಯಿಕಿರಣ ಸೇಠಿಯಾ, ಜಿ.ಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಪ್ರಮುಖರುಗಳಾದ ಮಂಕಾಳ ಗೌಡ, ಸಂಜಯ ನಾಯ್ಕ, ಮಂಜುನಾಥ ನಾಯ್ಕ, ನಾಗರಾಜ ನಾಯ್ಕ ಅವರ್ಸಾ ಭಾಗದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.