ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರ ಆರಂಭವಾಗಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಸರ್ಕಾರ ರಚನೆಯ ಪ್ರಕ್ರಿಯೆ ಚುರುಕುಗೊಂಡಿದ್ದು, ಮೇ 9ರಂದು ನೂತನ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಘೋಷಿಸಿದ್ದಾರೆ.
ವಿಶೇಷವೆಂದರೆ, ಮೇ 9 ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ. ಅದೇ ದಿನದಂದು ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸುವ ಮೂಲಕ ಬಂಗಾಳದ ಸಾಂಸ್ಕೃತಿಕ ಪರಂಪರೆ ಮತ್ತು ರಾಜಕೀಯ ಬದಲಾವಣೆಯನ್ನು ಬೆಸೆಯುವ ತಂತ್ರ ರೂಪಿಸಿದೆ. ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ಬಂಗಾಳದ ಅಸ್ಮಿತೆಯ ಪುನರುತ್ಥಾನ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ಈ ಐತಿಹಾಸಿಕ ಜಯದ ಹರಿಕಾರ ಎನ್ನಲಾದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಪ್ರಬಲವಾಗಿ ಕೇಳಿಬರುತ್ತಿದ್ದಾರೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದ ಸುವೇಂದು, ಈ ಬಾರಿ ಮಮತಾ ಅವರ ಭದ್ರಕೋಟೆ ಎನಿಸಿದ ಭವಾನಿಪುರದಲ್ಲೂ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ದೀದಿಗೆ ಸೋಲಿನ ರುಚಿ ತೋರಿಸಿದ್ದಾರೆ. ಈ ಗೆಲುವಿನ ಮೂಲಕ ಅವರು ಬಂಗಾಳದ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ.
ಸರ್ಕಾರ ರಚನೆಯ ಅಂತಿಮ ರೂಪುರೇಷೆ ಸಿದ್ಧಪಡಿಸಲು ಸುವೇಂದು ಅಧಿಕಾರಿ ಮತ್ತು ರಾಜ್ಯದ ಪ್ರಮುಖ ನಾಯಕರು ಮಂಗಳವಾರ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದ ಕುರಿತು ಚರ್ಚಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಈ ಗೆಲುವನ್ನು “ಬಂಗಾಳದ ಹೊಸ ಯುಗದ ಉದಯ” ಎಂದು ಬಣ್ಣಿಸಿದ್ದು, ಅಭಿವೃದ್ಧಿಯ ರಾಜಕಾರಣಕ್ಕೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ.
17ನೇ ವಿಧಾನಸಭೆಯ ಅವಧಿ ಮೇ 7ಕ್ಕೆ ಅಂತ್ಯಗೊಳ್ಳಲಿದ್ದು, ಮೇ 9ರಂದು ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಪೂರ್ವ ಭಾರತದಲ್ಲಿ ತನ್ನ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿರುವ ಬಿಜೆಪಿ, ಬಂಗಾಳದಲ್ಲಿ ಯಾವ ರೀತಿಯ ಆಡಳಿತ ನೀಡಲಿದೆ ಎಂಬ ಕುತೂಹಲ ಇಡೀ ದೇಶದ ಗಮನ ಸೆಳೆದಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು ಎಂಬ ಅಧಿಕೃತ ಮುದ್ರೆ ಬೀಳಲಿದೆ.



