ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಸಾಲು ಸಾಲು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಈಗಿನಿಂದಲೇ ಭರ್ಜರಿ ತಾಲೀಮು ನಡೆಸುತ್ತಿದೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಎಲ್ಲಾ ನೂತನ ರಾಜ್ಯ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಸಭೆಯನ್ನು ಕರೆಯಲಾಗಿದೆ.
ಇತ್ತೀಚೆಗಷ್ಟೇ ಹೊಸ ಉಸ್ತುವಾರಿಗಳನ್ನು ನೇಮಕಾತಿಗಳನ್ನು ಮಾಡಿದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ಈ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ.
2027ರ ವಿಧಾನಸಭಾ ಚುನಾವಣೆಗಳೇ ಟಾರ್ಗೆಟ್
ಮುಂಬರುವ 2027ರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತು ಹಿಮಾಚಲಪ್ರದೇಶ ಸೇರಿದಂತೆ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಜರುಗಲಿವೆ. ಈ ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳಲು ಪಕ್ಷದ ತಳಮಟ್ಟದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಉತ್ತರ ಪ್ರದೇಶದ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ, ಸಹ-ಉಸ್ತುವಾರಿಗಳಾದ ಮೇಧಾ ಕುಲಕರ್ಣಿ, ಜಗದೀಶ್ ಪಟೇಲ್, ಪ್ರದೀಪ್ ವರ್ಮಾ ಹಾಗೂ ಅನಂತ್ ಓಝಾ ಸಭೆಯಲ್ಲಿ ಪಾಲ್ಗೊಳಲಿದ್ದಾರೆ. ಇವರೊಂದಿಗೆ ಉತ್ತರಾಖಂಡ, ದೆಹಲಿ, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಉಸ್ತುವಾರಿಗಳು ತಮ್ಮ ಟೀಮ್ನೊಂದಿಗೆ ದೆಹಲಿಗೆ ಆಗಮಿಸಿದ್ದಾರೆ.
ಅ. 3, 4 ಕ್ಕೆ ಮಥುರಾದಲ್ಲಿ ಮಹತ್ವದ ಸಭೆ
ಇಂದಿನ ಸಭೆಯ ಬೆನ್ನಲ್ಲೇ, ದೇಶದ ಅತ್ಯಂತ ದೊಡ್ಡ ರಾಜಕೀಯ ರಣರಂಗವಾಗಿರುವ ಉತ್ತರ ಪ್ರದೇಶಕ್ಕೆ ಬಿಜೆಪಿ ವಿಶೇಷ ಒತ್ತು ನೀಡಿದೆ. ಅ. 3 ಮತ್ತು 4 ರಂದು ಮಥುರಾದಲ್ಲಿ ಎರಡು ದಿನಗಳ ಕಾಲ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ:
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲೇ ಮಥುರಾದ ಬ್ರಜ್ ವಲಯದಲ್ಲಿ ಈ ಸಭೆ ನಡೆಯಲಿದ್ದು, ಯುಪಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಹಿರಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಮತದಾರರ ಮನೆಬಾಗಿಲಿಗೆ ತಲುಪಿಸುವ ಹೊಸ ಯೋಜನೆಗಳನ್ನು ಇಲ್ಲಿ ರೂಪಿಸಲಾಗುತ್ತದೆ.



