ಬಿಜೆಪಿ ಸರ್ಕಾರ ಬಂಜಾರಾ ಸಮುದಾಯದವರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಆರೋಪ

ಹೊಸದಿಗಂತ ವರದಿ ವಿಜಯಪುರ:

ಬಿಜೆಪಿ ಸರ್ಕಾರ ಬಂಜಾರಾ ಸಮುದಾಯದವರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಲಂಬಾಣಿ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಿದೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿರುವುದು ಕಾಂಗ್ರೆಸ್‌ ಸರ್ಕಾರ ಎಂದರು.

ಅಂದು ಬಂಗಾರಪ್ಪನವರ ಸರ್ಕಾರದಲ್ಲಿ, ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಯೋಜನೆ ರೂಪುಗೊಳಿಸಿದ್ದರು. 1992 ರಲ್ಲಿ ಪ್ರಥಮ ಬಾರಿಗೆ ಸುತ್ತೋಲೆ ಮೂಲಕ ಈ ಯೋಜನೆಗೆ ಚಾಲನೆ ಸಿಕ್ಕಿತು. ಕಾಂಗ್ರೆಸ್ ಸರ್ಕಾರಗಳು ಬಂದಾಗಲೆಲ್ಲ ಇದಕ್ಕೆ ಚಾಲನೆ ಸಿಗುತ್ತ ಬಂದಿದೆ. ಆಗ ಸುಮಾರು 227 ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆದವು ಎಂದರು.

2013ರಲ್ಲಿ ಬಂದ ನಮ್ಮ ಸರ್ಕಾರದ ಅವಧಿಯಲ್ಲಿ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನರಸಿಹಯ್ಯ ನೇತೃತ್ವದ ತಜ್ಞರ ಸಮಿತಿ ರಚನೆ ಮಾಡಿತು. ನರಸಿಂಹಯ್ಯ ಸಮಿತಿ ನೀಡಿದ ಶಿಫಾರಸ್ಸುಗಳನ್ನು ಆಧರಿಸಿ ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ನಮ್ಮ ಸರ್ಕಾರ ಕೈಗೊಂಡ ಕ್ರಮಗಳು ಹತ್ತಾರಿವೆ ಎಂದರು.

ಆದರೆ ಬಿಜೆಪಿ ಸರ್ಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ, ಹಕ್ಕುಪತ್ರಗಳನ್ನು ನೀಡಿದ್ದೇವೆ ಎಂದು ಹೇಳುತ್ತಿರುವುದು ಬರಿ ತೋರ್ಪಡೆಗೆ ಮಾತ್ರ. ಹಾಗೇನಿದ್ದರು ಬಂಜಾರಾ ಸಮಾಜದವರ ಬಗ್ಗೆ ಕಾಳಜಿ ಇದ್ದರೆ ದೇಶದ ಹಲವು ರಾಜ್ಯಗಳಲ್ಲಿ ವಾಸಿಸುತ್ತಿರುವ ಅವರನ್ನು ಎಸ್ಸಿ ಪಟ್ಟಿಗೆ ಸೆರ್ಪಡಿಸುವುದು ಸೇರಿದಂತೆ ಅವರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!