ಕಾಂಗ್ರೆಸ್’ನ್ನು ಎದುರಿಸುವ ತಾಕತ್ತು ಬಿಜೆಪಿಗಿದೆ: ಕೊಡಗು ಬಿಜೆಪಿ

ಹೊಸದಿಗಂತ ವರದಿ, ಮಡಿಕೇರಿ:
ಕಾಂಗ್ರೆಸ್’ನ ಪ್ರತಿಭಟನೆಗೆ‌ ಹೆದರಿ‌ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿಸುವ ಮೂಲಕ ಬಿಜೆಪಿ, ಕಾಂಗ್ರೆಸ್’ನ ಮಡಿಕೇರಿ ಚಲೋ ಪ್ರತಿಭಟನೆಯನ್ನು ರದ್ದು ಮಾಡಿಸಿದೆ ಎಂಬ ಕಾಂಗ್ರೆಸ್’ನ ಹೇಳಿಕೆಗೆ ತಿರುಗೇಟು ನೀಡಿರುವ ಕೊಡಗು ಜಿಲ್ಲಾ ಬಿಜೆಪಿ, ತಮ್ಮ ಹೋರಾಟದಿಂದಲೇ ಮೇಲೆ ಬಂದಿರುವ ಪಕ್ಷವಾಗಿದ್ದು, ಯಾವುದೇ ಪ್ರತಿಭಟನೆಗಳಿಗೆ ಹೆದರುವ ಪಕ್ಷವಲ್ಲ. ಅಲ್ಲದೆ ಕಾಂಗ್ರೆಸ್’ನ್ನು ಎದುರಿಸುವ ತಾಕತ್ತು ಕೊಡಗು ಬಿಜೆಪಿಗಿದೆ ಎಂದು ಗುಡುಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ರಾಜ್ಯದ ವಿವಿಧೆಡೆಯಿಂದ ಒಂದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿದ್ದರೆ, ಬಿಜೆಪಿ ಕೊಡಗು ಜಿಲ್ಲೆಯೊಂದರಿಂದಲೇ ಒಂದು ಲಕ್ಷ ಮಂದಿಯನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆ. ಆದರೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನನ್ನು ಗೌರವಿಸುವ ನಿಟ್ಟಿನಲ್ಲಿ ಬಿಜೆಪಿಯ ಜನಜಾಗೃತಿ ಸಮಾವೇಶವನ್ನು ಮುಂದೂಡಿರುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಕಾರ್ಯಕರ್ತನೇ ಎಂಬುದು ದೃಢಪಟ್ಟ ಬಳಿಕವೂ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಮಡಿಕೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆರೋಪಿಸಿದ ಅವರು, ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.‌ ತಪ್ಪಿತಸ್ಥರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ. ಆದರೂ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರಲ್ಲದೆ, ಪೊನ್ನಣ್ಣ ಅವರೇ ಪರೋಕ್ಷವಾಗಿ ಎಸ್ ಪಿ ಯವರ ವರ್ಗಾವಣೆಗಾಗಿ ಈ ಪ್ರತಿಭಟನೆ‌ ನಡೆಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರು ಬರುವುದು ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸಲು ಬಿಜೆಪಿ ಮೊಟ್ಟೆ ಎಸೆತದ ನಾಟಕವನ್ನು ಸೃಷ್ಟಿ ಮಾಡಿದೆ ಎಂಬ ಎ.ಎಸ್ ಪೊನ್ನಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ‌ರಾಬಿನ್‌ ದೇವಯ್ಯ, ವಿದ್ಯುತ್ ನಿಗಮದಲ್ಲಿ ಕರ್ತವ್ಯದಲ್ಲಿದ್ದ ಅಯ್ಯಪ್ಪ ಅವರನ್ನು ನಿಯೋಜಿಸುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದೇ ಕೆ.ಜಿ.ಬೋಪಯ್ಯ. ಅಪ್ಪಚ್ಚುರಂಜನ್ ಹಾಗೂ ವಿಧಾನ‌ಪರಿಷತ್ ಸದಸ್ಯ ಸುಜಾಕುಶಾಲಪ್ಪ ಅವರು ಕೂಡಾ ಇದಕ್ಕೆ ಸಹಮತ ವ್ಯಕ್ತಪಡಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿಸಿದರಲ್ಲದೆ,ಈ‌ ಸಂಬಂದ ಮುಖ್ಯಮಂತ್ರಿಯವರಿಗೆ ಬೋಪಯ್ಯ ಬರೆದಿರುವ ಪತ್ರವನ್ನು ಪ್ರದರ್ಶಿಸಿದರು.
ಕೊಡವರ ಬಗ್ಗೆ ಮೊಸಳೆ ಕಣ್ಣೀರು:
ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊಡಗಿನಲ್ಲಿ ಜಾತಿಯ ವಿಷ ಬೀಜವನ್ನು ಎ.ಎಸ್. ಪೊನ್ನಣ್ಣ ಬಿತ್ತುತ್ತಿದ್ದಾರೆ.ಎಸ್ಪಿ ಅಯ್ಯಪ್ಪ ಅವರನ್ನು ವರ್ಗಾಯಿಸುವಂತೆ ಪರೋಕ್ಷವಾಗಿ ಒತ್ತಾಯಿಸಲೆಂದೇ ಅವರು ಆ.19ರಂದು ಎಸ್.ಪಿ.ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಕೊಡವ ಅಧಿಕಾರಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪೊನ್ನಣ್ಣ ಅವರು, ಹಿಂದೆ ಸಿದ್ದರಾಮಯ್ಯ ಅವರ ಸರಕಾರವಿದ್ದಾಗ ಆಗಿನ ಸಚಿವರೊಬ್ಬರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಡಿವೈಎಸ್ ಪಿ ಗಣಪತಿ ಅವರು ಆತ್ಮಹತ್ಯೆಗೆ ಶರಣಾದಾಗ ಮೌನವಹಿಸಿದ್ದೇಕೆ ಎಂದು ರಾಬಿನ್ ದೇವಯ್ಯ ಪ್ರಶ್ನಿಸಿದರು.ಅಲ್ಲದೆ ತಾನು ವೀರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಉದ್ದೇಶದಿಂದ ಸಿದ್ದರಾಮಯ್ಯನವರನ್ನು ಮೆಚ್ಚಿಸಲು ಪೊನ್ನಣ್ಣ ಈ ನಾಟಕವಾಡುತ್ತಿದ್ದಾರೆ ಎಂದೂ ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!