ಅಧಿಕಾರಕ್ಕಾಗಿ ದೇಶ ವಿಭಜನೆಯನ್ನು ಸಮರ್ಥಿಸುವ ಪಾರ್ಟಿ ಬಿಜೆಪಿ ಅಲ್ಲ: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಬೆಂಗಳೂರು: ಪಿಎಫ್‍ಐ ಬ್ಯಾನ್ ಮಾಡಿದ್ದಕ್ಕೆ ಸರಕಾರಕ್ಕೆ ಅಭಿನಂದನೆಗಳು. ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೆ ಹಲವು ಕೊಲೆ, ಶಾಂತಿಭಂಗ ಕೃತ್ಯಗಳಲ್ಲಿ ಭಾಗಿಯಾಗಿದ್ದಲ್ಲದೆ ಭಾರತವನ್ನು 2047ರೊಳಗೆ ಮೊಘಲ್ ಸ್ಥಾನ ಕಲ್ಪನೆಯ ದೇಶ ವಿಭಜನೆಯ ಸಂಚು ನಡೆಸಲಾಗಿತ್ತು. ಅಲ್ಲದೆ, ಭಾರತೀಯರಿಗೆ ವಿಷವುಣಿಸುವಂಥ ಸಂಚನ್ನು ಪಿಎಫ್‍ಐ ಮತ್ತು ಅದರ ಅಂಗಸಂಸ್ಥೆಗಳು ಮಾಡಿದ್ದವು ಎಂಬುದು ಪ್ರಾಥಮಿಕ ತನಿಖೆಯಿಂದ ಸಿಕ್ಕಿದ ಮಾಹಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವು ಉಗ್ರಗಾಮಿ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದ ‘ಸಿಮಿ’ಯನ್ನು 2001ರಲ್ಲಿ ಭಾರತದಲ್ಲಿ ಬ್ಯಾನ್ ಮಾಡಿತ್ತು. ನಂತರ ‘ಸಿಮಿ’ಯ ಹೊಸ ಅವತಾರವಾಗಿ ಪಿಎಫ್‍ಐ ಹುಟ್ಟಿಕೊಂಡಿದ್ದು, ಅದರ ರಾಜಕೀಯ ಅಂಗಸಂಸ್ಥೆಯಾಗಿ ಎಸ್‍ಡಿಪಿಐ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಸಿಕ್ಕಿರುವ ಅಂಶ ಎಂದರು.

ಕೇರಳದಲ್ಲಿ 2010ರ ಜುಲೈ ತಿಂಗಳಿನಲ್ಲಿ ಟಿ.ಜೆ.ಜೋಸೆಫ್ ಎಂಬ ಉಪನ್ಯಾಸಕರ ಕೈಯನ್ನು ವಿದ್ಯಾರ್ಥಿಗಳ ಎದುರುಗಡೆಯೇ ಕತ್ತರಿಸಿದ್ದರು. ಕೇರಳದಲ್ಲಿ 2012ರಲ್ಲಿ ಆಗಿನ ಒಮ್ಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರಕಾರವು ಅಫಿದವಿಟ್ ಸಲ್ಲಿಸಿ 27ಕ್ಕೂ ಹೆಚ್ಚು ಆರೆಸ್ಸೆಸ್ ಮತ್ತು ಸಿಪಿಎಂ ಕಾರ್ಯಕರ್ತರ ಹತ್ಯೆಗೆ ಪಿಎಫ್‍ಐ ಕಾರಣವಾಗಿದೆ. ಕೋಮ ಗಲಭೆಯನ್ನು ಉಂಟು ಮಾಡುವ ಸಂಚು ನಡೆಸುತ್ತಿದೆ. ಇದನ್ನು ನಿಷೇಧಿಸಬೇಕೆಂದು ಕೋರಿತ್ತು. ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಮಾಹಿತಿಯೂ ತನಿಖೆ ವೇಳೆ ಲಭಿಸಿದೆ ಎಂದು ತಿಳಿಸಿದರು.

ರಾಷ್ಟ್ರಭಕ್ತ ಸಂಘಟನೆ ಮತ್ತು ರಾಷ್ಟ್ರಭಕ್ತ ನಾಯಕರನ್ನು ಗುರಿಯಾಗಿಸಿ ಹತ್ಯೆ ನಡೆಸುವ ಸಂಚಿನಲ್ಲಿ ಇವರು ತೊಡಗಿದ್ದರು. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯ ಹಿಂದೆ ಪಿಎಫ್‍ಐ ಮಾಸ್ಟರ್ ಮೈಂಡ್ ಇದೆ ಎಂಬ ವರದಿಯನ್ನೂ ಪ್ರಾಥಮಿಕ ತನಿಖೆ ಬಳಿಕ ಕೊಡಲಾಗಿದೆ ಎಂದು ವಿವರ ನೀಡಿದರು.

ಹೀಗೇ ಬಿಟ್ಟಿದ್ದರೆ ಭಾರತ ಅಂತರ್ಯುದ್ಧ ಎದುರಿಸುವ ಪರಿಸ್ಥಿತಿ ಬರುತ್ತಿತ್ತು. ಅನಗತ್ಯ ಭಯ ನಿರ್ಮಾಣ ಮಾಡಿ, ಮುಸಲ್ಮಾನರನ್ನು ದೇಶದ ವಿರುದ್ಧ ಎತ್ತಿಕಟ್ಟುವುದರ ಜೊತೆಗೆ ಎಡ ಪಂಥೀಯ ಉಗ್ರವಾದಿಗಳ ಜೊತೆ ಕೈ ಜೋಡಿಸಿ ಭಾರತವನ್ನು ವಿಭಜಿಸುವ ಸಂಚಿನ ಜೊತೆಜೊತೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುವ ಕೃತ್ಯದಲ್ಲಿ ಇವರು ತೊಡಗಿದ್ದರು ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಇವರ ಜೊತೆಗೆ ಇರುವವರು, ಬೆಂಬಲಿಸುವವರು ಭಾರತ ಪ್ರೇಮಿಗಳಲ್ಲ; ಸಂವಿಧಾನ ಪ್ರೇಮಿಗಳೂ ಅಲ್ಲ. ಇವರೆಲ್ಲರೂ ಭಾರತ ವಿರೋಧಿಗಳು. ಭಾರತ ವಿಭಜನೆಯ ಸಂಚನ್ನು ಹೊಂದಿದ್ದವರು. ನೆಪಮಾತ್ರಕ್ಕೆ ಗುರಾಣಿಯ ರೀತಿಯಲ್ಲಿ ಕೆಲವು ದಲಿತ ವ್ಯಕಿಗಳನ್ನು ಬಳಸಿಕೊಳ್ಳುತ್ತ, ಗುರಾಣಿ ರೀತಿಯಲ್ಲಿ ಸಂವಿಧಾನವನ್ನು ಉಲ್ಲೇಖ ಮಾಡುತ್ತ ಒಳಗೆ ಭಾರತವನ್ನು ಮೊಘಲ್ ಸ್ಥಾನ ಮಾಡುವ ಸಂಚಿನಲ್ಲಿ ತೊಡಗಿದ್ದರು. ಸರಕಾರದ, ಸೈನ್ಯ, ಆಡಳಿತ, ಪೊಲೀಸ್ ಇಲಾಖೆಯ ಆಯಕಟ್ಟಿನ ಜಾಗಗಳಲ್ಲಿ ಮಾತ್ರವಲ್ಲದೆ ನ್ಯಾಯಾಂಗ ವ್ಯವಸ್ಥೆಯ ಒಳಗೆ ತನ್ನ ಬೆಂಬಲಿಗರನ್ನು ವ್ಯವಸ್ಥಿತವಾಗಿ ಕೂರಿಸಿ 2047ಕ್ಕೆ ಅಂತರ್ಯುದ್ಧದ ಮೂಲಕ ಭಾರತೀಯತೆಯನ್ನು ನಾಶಮಾಡಿ ಮೊಘಲ್ ಸ್ಥಾನ ನಿರ್ಮಿಸುವ ಸಂಚು ಮಾಡಿದ್ದರು ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ ಎಂದರು.

ಇಷ್ಟೆಲ್ಲ ಮಾಹಿತಿ ಇದ್ದರೂ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿದ್ದವರು ಕೋರ್ಟಿಗೆ ಅಫಿದವಿಟ್ ಸಲ್ಲಿಸಿದ ನಂತರವೂ ಕೂಡ ಕರ್ನಾಟಕದ ಅವತ್ತಿನ ಕಾಂಗ್ರೆಸ್ ಸರಕಾರ, ಆಗಿನ ಸಿಎಂ ಸಿದ್ದರಾಮಯ್ಯರವರು ಹಲವು ಭಾಗ್ಯಗಳ ಜೊತೆಗೆ ‘ಉಗ್ರ ಭಾಗ್ಯ’ ಯೋಜನೆಯನ್ನು ಕೊಟ್ಟಿದ್ದು ಈ ನಾಡಿನ ದುರಂತ ಎಂದು ತಿಳಿಸಿದರು.

‘ಉಗ್ರ ಭಾಗ್ಯ’ ಯೋಜನೆಯ ಮೂಲಕ 175ಕ್ಕೂ ಹೆಚ್ಚು ಪ್ರಕರಣಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಪಿಎಫ್‍ಐ, ಎಸ್‍ಡಿಪಿಐ ಬೆಂಬಲಿತ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆದು ತನ್ನ ಮತಬೇಟೆಗೆ ಭಾರತವನ್ನು ಶಿಕಾರಿ ಮಾಡಲು ಹೊರಟಿದ್ದ ಸರಕಾರ ಸಿದ್ದರಾಮಯ್ಯನವರದು ಎಂದು ದುಃಖದಿಂದ ನೆನಪಿಸುವುದಾಗಿ ತಿಳಿಸಿದರು.

‘ಉಗ್ರ ಭಾಗ್ಯ’ ಯೋಜನೆಯ ಕಾರಣಕ್ಕಾಗಿ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆ ಆಯಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. 370ನೇ ವಿಧಿಯನ್ನು ಹೇರಿ ಕಾಶ್ಮೀರವನ್ನು ನರಕದ ಕೂಪವಾಗಿ ಕಾಂಗ್ರೆಸ್ ಸರಕಾರ ಪರಿವರ್ತನೆ ಮಾಡಿತ್ತು. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಅಕಾಲಿದಳದ ವಿರುದ್ಧ ಭಿಂದ್ರನ್‍ವಾಲೆಯನ್ನು ಎತ್ತಿಕಟ್ಟಿ ಪಂಜಾಬ್ ಅನ್ನು ಬೆಂಕಿಗೆ ತಳ್ಳಿದ್ದು ಮಾತ್ರವಲ್ಲ; ಭಿಂದ್ರನ್‍ವಾಲೆಯನ್ನು ಎತ್ತಿಕಟ್ಟಿದ ದುಷ್ಪರಿಣಾಮ; ಎತ್ತಿಕಟ್ಟಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ಅದಕ್ಕೆ ಬಲಿ ಆಗಬೇಕಾಯಿತು ಎಂದು ವಿಶ್ಲೇಷಿಸಿದರು.

ಎಲ್‍ಟಿಟಿಇ ಜೊತೆ ಹಾವು ಏಣಿ ಆಟ ಆಡಿದ ದುಷ್ಪರಿಣಾಮದಿಂದ ರಾಜೀವ್ ಗಾಂಧಿಯವರು ಎಲ್‍ಟಿಟಿಇಗೆ ಬಲಿಯಾಗಬೇಕಾಯಿತು. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಉಗ್ರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಉಗ್ರರಿಗೆ ಬಿಡುಗಡೆ ಭಾಗ್ಯ ಕೊಟ್ಟ ಕಾರಣಕ್ಕೆ ತನ್ನದೇ ಶಾಸಕ ತನ್ವೀರ್ ಸೇಠ್ ಮಾರಣಾಂತಿಕ ದಾಳಿಗೆ ಒಳಗಾಗಿ ಕೂದಲೆಳೆಯಲ್ಲಿ ಅವರು ಪಾರಾಗಿದ್ದರು ಎಂದು ವಿವರಿಸಿದರು. ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡಿದ್ದು ಆರೆಸ್ಸೆಸ್ ಸ್ವಯಂಸೇವಕರಲ್ಲ; ತಮ್ಮದೇ ಪಾರ್ಟಿ ಬೆಳೆಸಿದ ಉಗ್ರ ಭಾಗ್ಯ ಯೋಜನೆಯ ಫಲಾನುಭವಿಗಳು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಸೇಠ್ ಅವರಿಗೆ ತಿಳಿಸಿದರು.

ನೀವು ಪಿಎಫ್‍ಐ ಬ್ಯಾನ್ ಮತ್ತು ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಬೇಕಿತ್ತು. ಉಗ್ರ ಭಾಗ್ಯದ ಪೆಟ್ಟು ತಿಂದೂ ನಿಮಗೆ ಬುದ್ಧಿ ಬಾರದಿರುವುದು ದೌರ್ಭಾಗ್ಯದ ಸಂಗತಿ ಎಂದು ತನ್ವೀರ್ ಸೇಠ್ ಹೇಳಿಕೆ ವಿರುದ್ಧ ಆಕ್ಷೇಪ ಸೂಚಿಸಿದರು. ಅಧಿಕಾರಕ್ಕಾಗಿ ದೇಶ ವಿಭಜನೆಯನ್ನು ಸಮರ್ಥಿಸುವ ಪಾರ್ಟಿ ಬಿಜೆಪಿ ಅಲ್ಲ ಎಂದರು.

ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ರಾತ್ರಿಯಿಡೀ ಕೊಳ್ಳಿ ದೆವ್ವಗಳು ನರ್ತನ ಮಾಡಿದ್ದವು. ಉಗ್ರ ಭಾಗ್ಯದಿಂದ ಡಿಜೆ ಹಳ್ಳಿ, ಕೆಜಿ ಹಳ್ಳಿಗೆ ಬೆಂಕಿ ಹಾಕಿದ್ದರು. ಒಂದು ನೆಪ ಇಟ್ಟುಕೊಂಡು ತಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯನ್ನು ಭಸ್ಮ ಮಾಡಿದ್ದರು. ಇದೆಲ್ಲವನ್ನು ಮರೆತಂತೆ ಕಾಂಗ್ರೆಸ್ ವರ್ತಿಸಬಾರದು ಎಂದು ತಿಳಿಸಿದರು.

ತಮ್ಮ ತಾತ್ಕಾಲಿಕ ರಾಜಕೀಯದ ಆಸೆಗೆ ದೇಶ ಬಲಿಕೊಟ್ಟು ತಾವೂ ನಾಶ ಆಗಬೇಡಿ. ನಿಮ್ಮ ಉಗ್ರ ಭಾಗ್ಯ ಯೋಜನೆಯನ್ನು ಬಂದ್ ಮಾಡಿ ಎಂದು ಅವರು ಆಗ್ರಹಿಸಿದರು.

ಸಂವಿಧಾನ, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಅಪಾಯದಲ್ಲಿವೆ ಎನ್ನುವವರು ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಪುಸ್ತಕವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಅದರ 123, 125, 294, 297, 303, 332ನೇ ಪುಟಗಳನ್ನು ಓದಬೇಕು ಎಂದು ಸವಾಲೆಸೆದರು.

ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಇದೇ ಉದ್ದೇಶದಿಂದ ಪಿಎಫ್‍ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಲಾಗಿದೆ. ಅದು ಸ್ವಾಗತಾರ್ಹ ಎಂದು ತಿಳಿಸಿದರು.

ರಾಷ್ಟ್ರಭಕ್ತ ಮುಸಲ್ಮಾನರು ಧ್ವನಿ ಎತ್ತಬೇಕು. ಆ ಮೂಲಕ ನಾವು ಉಗ್ರವಾದಿಗಳು, ದೇಶ ವಿಭಜಕರ ಜೊತೆಗಿಲ್ಲ ಎಂಬ ಸಂದೇಶ ಸಾರಬೇಕು. ಬ್ಯಾನ್ ಮಾಡಿದ ಕಾರಣಕ್ಕೆ ಎಲ್ಲವೂ ಸಮಾಪ್ತಿ ಎಂದು ಭಾವಿಸಬಾರದು. ಹೊಸ ರೂಪ ತಾಳಬಹುದು; ಅಥವಾ ಹತಾಶೆಯಿಂದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಭಾರತವನ್ನು ಉಳಿಸಲು ಭಾರತೀಯತೆಯನ್ನು ಒಪ್ಪಿಕೊಂಡವರೆಲ್ಲರೂ ಒಟ್ಟಾಗಿ ಇರಬೇಕು ಎಂದು ಮನವಿ ಮಾಡಿದರು.

ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು. ಇದೆಲ್ಲದರ ಹಿಂದೆ ಇಂಟರ್ ನ್ಯಾಷನಲ್ ಟೂಲ್ ಕಿಟ್ ಇದೆ ಎಂದು ಆರೋಪಿಸಿದರು. ಆಜಾದಿ ಘೋಷಣೆ ಕೂಗುವವರಿಗೆ ಭಾರತ ವಾಸಯೋಗ್ಯವಲ್ಲ ಎಂದು ಅನಿಸಿದ್ದರೆ ಅಂಥವರಿಗೆ ಅಫಘಾನಿಸ್ತಾನ, ಪಾಕಿಸ್ತಾನ ಇದೆ. ಫ್ರೀ ವೀಸಾ ಕೊಡುತ್ತೇವೆ. ನೀವು ಅಲ್ಲಿ ಹೋಗಿ ನಿಮಗೆ ಇಚ್ಛಿಸಿದಂತೆ ಇರಬಹುದು. ದೇಶಕ್ಕೆ ಮಸಿ ಬಳಿಯುವ ಕೃತ್ಯಕ್ಕೆ ಅವಕಾಶ ಇಲ್ಲ ಎಂದು ನುಡಿದರು.

“ಆರೆಸ್ಸೆಸ್ ಅನ್ನೂ ನಿಷೇಧಿಸಬೇಕೆಂಬ ಸಿದ್ದರಾಮಯ್ಯ ಬೇಡಿಕೆ” ಕುರಿತ ಪ್ರಶ್ನೆಗೆ ಉತ್ತರ ನೀಡಿದ ಸಿ.ಟಿ.ರವಿ ಅವರು, ಸುಣ್ಣ ಮತ್ತು ಬೆಣ್ಣೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲಾರದ ಸ್ಥಿತಿಗೆ ಸಿದ್ದರಾಮಯ್ಯನವರು ಬಂದಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು ತಿಳಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತರ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷ ಮುಜಾಮಿಲ್ ಅಹಮದ್ ಬಾಬು ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!