ಸಮಾಜಘಾತಕ ಶಕ್ತಿಗಳ ಮಟ್ಟ ಹಾಕಲು ಬಿಜೆಪಿ ಸಿದ್ಧ: ಸಂಜಯ ಪಾಟೀಲ

ಹೊಸದಿಗಂತ ವರದಿ ಬೆಳಗಾವಿ:

ಎಲ್ಲಾ ಸಮಾಜದ ಸಾಧು, ಸಂತರು, ಸನ್ಯಾಸಿ ಹಾಗೂ ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ದವಾಗಿದ್ದು, ಸಮಾಜದಲ್ಲಿ ಘಾತಕ ಶಕ್ತಿಗಳ ಮಟ್ಟಾಹಾಕಲು ಬಿಜೆಪಿ ಸಿದ್ದ ಎಂದು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಡಿನಲ್ಲಿ ಸಾಧು ಸಂತರ ಹಾಗೂ ಸನ್ಯಾಸಿಗಳ ತ್ಯಾಗದಿಂದ ಇಂದು ಪ್ರತಿಯೊಂದು ಸಮಾಜದ ಜನರು ಅವರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ಪಟ್ಟಬದ್ಧ ಹಿತಾಸಕ್ತಿಯ ಜನರ ಆಧಾರ ರಹಿತ ಟೀಕೆ ಟಿಪ್ಪಣೆಗಳಿಂದ ಧಾರ್ಮಿಕ ಗುರು ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.

ಭಾರತ ಪ್ರಪಂಚಕ್ಕೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ವಿಚಾರ ನೀಡಿದ ಹಾಗೂ ನೀಡುತ್ತಿರುವ ದೇಶವಾಗಿದೆ. ಈ ದೇಶದಲ್ಲಿರುವಷ್ಟು ಋಷಿ ಮುನಿಗಳು, ಸನ್ಯಾಸಿಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ. ಇವರಿಗೆ ನೀಡುವ ಪೂಜನೀಯ ಸ್ಥಾನ ದೇಶದಲ್ಲಿ ಬೇರೆ ಯಾರಿಗೂ ಸಿಗದು. ಆದರೆ ಕೆಲವೊಂದು ಷಡ್ಯಂತ್ರಗಳ ಮೂಲಕ ಇಂದು ರಾಜ್ಯದಲ್ಲಿ ಕೆಲ ಮಠಾದೀಶರ ಬಗ್ಗೆ ಇಲ್ಲ ಸಲ್ಲದ ನಿರರ್ಥಕ ಅರೋಪಗಳನ್ನು ಮಾಡುತ್ತಿದ್ದಾರೆ. ಪರಸ್ಪರ ಮಾತನಾಡಿದ ಸತ್ಯಕ್ಕ ಮತ್ತು ರುದ್ರಮ್ಮ ಹಾಸೀನಾಳ ಮಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ನಾಡಿನ ಅನೇಕ ಮಠಾಧೀಶರಿಗೆ ಮುಜುಗರ ಉಂಟು ಮಾಡುವುದರೊಂದಿಗೆ ಅವರ ಚಾರಿತ್ರ್ಯ ಹಾಳುಮಾಡಲು ಪ್ರಯತ್ನಿಸಲಾಗಿದೆ.

ಕಾಯಕ ತತ್ವದಡಿ ನಿಷ್ಠುರತೆ ಹೊಂದಿದ್ದ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಡಿವಾಳೇಶ್ವರ ಮಠದ ಪೂಜ್ಯ ಬಸವ ಸಿದ್ದಲಿಂಗ ಮಹಾಸ್ವಾಮಿಗಳು ಸುಳ್ಳು ಆಪಾದನೆಯ ಆಡಿಯೋ ಕಿವಿಗೆ ಬಿದ್ದ ತಕ್ಷಣ ಮಾನಸಿಕವಾಗಿ ನೊಂದಿದ್ದರು, ಕೆಲ ಕುಹಕಿಗಳು ಇದನ್ನೇ ದೊಡ್ಡದಾಗಿ ಮಾಡಿದ್ದರಿಂದ ಈ ನಾಡಿನ ಒಬ್ಬ ಗಟ್ಟಿತನದ ಮಠಾಧೀಶರನ್ನ ಕಳೆದುಕೊಂಡಿದೆ. ಇದು ಈ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇಂತಹ ಸೂಕ್ಷ್ಮ ಮನಸ್ಸಿನ ಸ್ವಾಮೀಜಿಗಳ ಮೇಲೆ ಹಾಗೂ ಎಲ್ಲ ಸಮಾಜಗಳ ಮಠಾಧೀಶರ ಮೇಲೆ ಲೈಂಗಿಕ ಅಸ್ತ್ರವನ್ನಿಟ್ಟುಕೊಂಡು ವ್ಯವಸ್ಥಿತ ಸಂಚು ರೂಪಿಸಿರುವ ವ್ಯಕ್ತಿಗಳನ್ನು ಹೆಡಮುರಿ ಕಟ್ಟಿ ಬಂಧಿಸಿಬೇಕು ಎಂಬುದೇ ಬಿಜೆಪಿ ಪಕ್ಷದ ನಿಲುವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮತ್ತು ಪೋಲಿಸ್ ಇಲಾಖೆಗೆ ಆಗ್ರಹಿಸಲಾಗುವದು ಎಂದು ಸಂಜಯ ಪಾಟೀಲ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!