ಹೊಸದಿಗಂತ ವರದಿ ಹುಬ್ಬಳ್ಳಿ:
ಧಾರವಾಡದಲ್ಲಿ -ರಿಂಗ್ ಸಂಸ್ಕೃತಿ ಆರಂಭವಾಗಿರುವುದನ್ನು ಖಂಡಿಸಿ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರ ಭಾವಚಿತ್ರ ದಹಿಸಿದರು. ಎನ್.ಶಶಿಕುಮಾರ ಅವರನ್ನು ವರ್ಗಾವಣೆ ಮಾಡಬೇಕು ಎಂದು ಘೋಷಣೆ ಕೂಗಿದರು.
ಪೊಲೀಸ್ ಆಯುಕ್ತರ ವಿರುದ್ಧ ಟೆಂಗಿನಕಾಯಿ ವಾಗ್ದಾಳಿ
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಲ್ಯಾಂಡ್ ಮಾಫಿಯಾ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವು ನೋಡಿದರೆ, ಪೊಲೀಸ್ ಆಯುಕ್ತರೇ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದಾರೇ ಎಂಬ ಅನುಮಾನ ಮೂಡುತ್ತಿವೆ ಎಂದರು.
ಧಾರವಾಡದಲ್ಲಿ ನಡೆದ ಪೈರಿಂಗ್ ಇಡೀ ದೇಶಕ್ಕೆ ಗೊತ್ತಿದ್ದರೂ ಸಹ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಘಟನೆ ಬಗ್ಗೆ ತಿಳಿದುಕೊಳ್ಳುತ್ತೇವೆ ಹಾಗೂ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಾಕ್ಷಿಗಳು ದೊರೆತರು ಆರೋಪಿಗಳ ವಿರುದ್ಧ ಕಠಿಣ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಸಿಬಿ ತನಿಖೆ ವಿರುದ್ಧ ಅಸಮಾಧಾನ
ಅವಳಿನಗರದಲ್ಲಿ ನಡೆದ ಬಹುತೇಕ ಪ್ರಕರಣಗಳು ಸಿಸಿಬಿ ನಿರ್ವಹಿಸುತ್ತಿದ್ದು, ಅವುಗಳನ್ನು ಸಿಒಡಿಗೆ ನೀಡಬೇಕು. ಆರೋಪಿಗಳ ಮೇಲೆ ಮೂರು ನಾಲ್ಕು ಪ್ರಕರಣಗಳಿದ್ದರೂ ಅವರ ಮೇಲೆ ಕ್ರಮವಿಲ್ಲ . ಪೊಲೀಸ್ ಆಯುಕ್ತ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ
ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಂದ ಬಳಿಕ ಗುಂಡಾ ಸಂಸ್ಕೃತಿ ಆರಂಭವಾಗಿದೆ. ಗೃಹ ಮಂತ್ರಿ ರಾಜ್ಯದಲ್ಲಿ ಇದ್ದಾರೆ ಇಲ್ಲಾ ಎಂಬುವುದು ಗೊತ್ತಾಗುತ್ತಿಲ್ಲ. ವಿವಿಧ ಜಿಲ್ಲೆಯಲ್ಲಿ ಗುಂಡ ವರ್ತನೆ ನಡೆಯುತ್ತಿದ್ದು, ಸ್ವತಃ ಪೊಲೀಸ್ ಇಲಾಖೆ ಕುಮ್ಮಕ್ಕು ಕೊಡುತ್ತಿದೆ. ಹುಬ್ಬಳ್ಳಿ ಧಾರವಾಡ ಜನತೆ ಶಾಂತಿ, ಸುವ್ಯವಸ್ಥೆ ಕಾಪಾಡಿ, ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಮುಖಂಡ ನಾರಾಯಣ ಜರತಾರಘರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುವುದಕ್ಕೆ ಇದು ಉದಾಹರಣೆ. ಶಾಂತಿ ಪ್ರದೇಶವಾದ ಹುಬ್ಬಳ್ಳಿ ನಡೆದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಸುರಕ್ಷೆತೆ ಇಲ್ಲ ಅನಿಸುತ್ತಿದೆ. ಅಮಾಯಕ ರೈತರ ಜಮೀನು ಹೊಡೆಯುವ ಕೆಲಸ ನಡೆಯುತ್ತಿದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಲವರು ಪ್ರತಿಭಟನೆಯಲ್ಲಿ ಭಾಗಿ
ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ, ವೀಣಾ ಭಾರದ್ವಾಡ, ನಾರಾಯಣ ಜರತಾರಘರ, ವೆಂಕಟೇಶ ಕಾಟವೆ, ಭೀರಪ್ಪ ಖಂಡೇಕರ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಶಂಕರ ಪಾಟೀಲ, ಪ್ರವೀಣ ಹುರಳಿ, ಸಂತೋಷ ಅರಕೇರಿ, ರಾಜು ಕೋರ್ಯಾಣಮಠ, ಸೀಮಾ ಲದವಾ, ಪ್ರೀತಂ ಅರಕೇರಿ, ಪ್ರವೀಣ ಕುಬಸದ ಇದ್ದರು.



