ಹೊಸದಿಗಂತ ವರದಿ ಬೀದರ್:
2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ(ಬಿ) ರೈತ ಸಂಪರ್ಕ ಕೇಂದ್ರದಲ್ಲಿ ಮೇ.27 ರಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವರ್ಷ ಮುಂಗಾರು ಶೀಘ್ರ ಬರುವ ಮುನ್ಸೂಚನೆ ಇರುವುದರಿಂದ ರೈತರಿಗೆ ಬಿತ್ತನೆ ಸಮಯಕ್ಕೆ ಬೀಜಗಳು ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಮುಂಚಿತವಾಗಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಗುತ್ತಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ವಿವಿಧ ಬೆಳೆಗಳ ಬೀಜಗಳನ್ನು ಕೃಷಿ ಇಲಾಖೆಯ ಮೂಲಕ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುವರಿ ದರ ವಸೂಲಿಗೆ ಖಡಕ್ ಎಚ್ಚರಿಕೆ
ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು. ಈ ಕುರಿತು ಅಧಿಕಾರಿಗಳು ಹಾಗೂ ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ರೈತರ ಸಂಪರ್ಕ ಕೇಂದ್ರಗಳಲ್ಲಾಗಲಿ, ಖಾಸಗಿ ಕೇಂದ್ರಗಳಲ್ಲಾಗಲಿ ಯಾವುದೇ ಕಾರಣಕ್ಕೂ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ. ಇಂತಹ ಘಟನೆಗಳು ಎಲ್ಲಿಯಾದರೂ ನಡೆದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಬಿತ್ತನೆ ಬೀಜ ಅಥವಾ ರಸಗೊಬ್ಬರ ನೀಡಿದ ನಂತರ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದರದ ಪಟ್ಟಿಯನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಯಾವುದೇ ರೈತರಿಗೆ ದರದ ಬಗ್ಗೆ ಗೊಂದಲ ಅಥವಾ ಅನ್ಯಾಯವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ರೈತರಿಗೆ ಪೂರೈಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಕೊಡುವ ಮುನ್ನ ಪರಿಶೀಲಿಸಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ದೂರುಗಳಿಗೆ ಅವಕಾಶ ಕೊಟ್ಟಲ್ಲಿ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗಡಿ ಭಾಗದಲ್ಲಿ ಅಕ್ರಮ ಸಾಗಾಟಕ್ಕೆ ಬ್ರೇಕ್
ಪ್ರತಿ ವರ್ಷ ಇಲ್ಲಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಅಕ್ರಮ ಸಾಗಾಟ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿ, ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ನಮ್ಮ ರೈತರಿಗೆ ಬಂದ ಬಿತ್ತನೆ ಬೀಜ, ರಸಗೊಬ್ಬರ ಅನ್ಯರ ಪಾಲಾಗಬಾರದು. ನಮ್ಮ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಖಡಕ್ ಸೂಚನೆ ನೀಡಿದರು.
ಇದನ್ನೂ ಓದಿ:
ಔರಾದ(ಬಿ) ಕ್ಷೇತ್ರದಲ್ಲಿ ಹೆಚ್ಚಾಗಿ ಬೆಳೆಸಲಾಗುವ ಸೋಯಾ ಬೀನ್ ಹಾಗೂ ಮತ್ತಿತರೆ ಬೆಳೆಗಳ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕ್ಷೇತ್ರದ ಪ್ರತಿಯೊಬ್ಬ ರೈತರಿಗೂ ಅಗತ್ಯ ಪ್ರಮಾಣದ ಬೀಜಗಳು ಸಿಗುವಂತೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಯಾವುದೇ ರೈತ ಬೀಜಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಎಲ್ಲ ಗ್ರಾಮಗಳಲ್ಲಿ ಕಡ್ಡಾಯವಾಗಿ ಡೊಂಗೂರ ಸಾರಿಸಿ ಬಿತ್ತನೆ ಬೀಜ ವಿತರಿಸುವ ದಿನಾಂಕದ ಬಗ್ಗೆ ತಿಳಿಸಬೇಕು. ರೈತ ಸಂಪರ್ಕ ಕೇಂದ್ರಗಳು ರೈತರ ಸ್ನೇಹಿಯಾಗಿ ಕೆಲಸ ಮಾಡಬೇಕು. ರೈತರಿಗೆ ಯಾವುದೇ ರೀತಿಯ ಅನ್ಯಾಯವಾದರೆ ಸುಮ್ಮನಿರುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ರೈತರಿಗೆ ಕೃಷಿ ಇಲಾಖೆಯ ಸಲಹೆ
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಧೂಳಪ್ಪ ಪ್ರಾಸ್ತಾವಿಕ ಮಾತನಾಡಿ, ಸೋಯಾಬೀನ್ 36,100 ಕ್ವೀಂಟಾಲ್ ಬೇಡಿಕೆಯ ಪೈಕಿ 31,218 ಕ್ವೀಂಟಾಲ್ ಬಂದಿದೆ. ಹೆಸರು 300 ಕ್ವೀಂಟಾಲ್ ಪೈಕಿ 220 ಕ್ವೀಂಟಾಲ್ ಬಂದಿದೆ. ಹೆಸರು 100 ಕ್ವೀಂಟಾಲ್ ಪೈಕಿ 25 ಕ್ವೀಂಟಾಲ್ ಹಾಗೂ 50 ಕ್ವೀಂಟಾಲ್ ಪೈಕಿ 13 ಕ್ವೀಂಟಾಲ್ ಬಂದಿದೆ. ಉಳಿದ ಎಲ್ಲ ಬಿತ್ತನೆ ಬೀಜಗಳು ಅಗತ್ಯಕ್ಕೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಆತಂಕಪಡಬೇಕಿಲ್ಲ ತಮಗೆ ತಿಳಿಸಿದ ದಿನಾಂಕದಂದು ಬಿತ್ತನೆ ಬೀಜ ಪಡೆಯಬೇಕು ಎಂದು ತಿಳಿಸಿದರು.
ಎಲ್ಲ ರೈತರು ಒಂದೇ ಬೆಳೆಗೆ ಮೊರೆ ಹೋಗದೆ ಬೇರೆ-ಬೇರೆ ಬೆಳೆಗಳನ್ನು ಬಿತ್ತನೆ ಮಾಡಿದರೆ ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ 80 ಎಂ.ಎಂ ಮಳೆಯಾದ ನಂತರವೇ ಸೋಯಾಬೀನ್ ಬಿತ್ತನೆ ಮಾಡಬೇಕು. ದೊಡ್ಡ ಟ್ರಾಕ್ಟಾರ್ ಗಳಿಂದ ಹೆಚ್ಚಿನ ಆಳಕ್ಕೆ ಬಿತ್ತನೆ ಮಾಡುವುದರಿಂದ ಮೊಳಕೆ ಒಡೆಯುವುದು ಕಷ್ಟ. ಹಾಗಾಗಿ ರೈತರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಬಿತ್ತನೆ ಕೈಗೊಳ್ಳಬೇಕು. ಎಲ್ಲ ಬೆಳೆಗಳಿಗೂ ತಪ್ಪದೇ ವಿಮೆ ಮಾಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಸಂತೋಷ ಹಜಾರೆ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಕೃಷಿಕ ಸಮಾಜದ ಸದಸ್ಯ ಗೋವಿಂದರಾವ ಇಂಗಳೆ, ಸಚಿನ ರಾಠೋಡ, ಸಂಜು ವಡೆಯಾರ್ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಂತರ ಭಂಡಾರಕುಮಟಾ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



