ಹೊಸದಿಗಂತ ವರದಿ ಚಿತ್ರದುರ್ಗ:
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ನೇತೃತ್ವದ ರಾಜ್ಯ ತಂಡ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಹಾಗೂ ರೈತರ ಕಷ್ಟ-ನಷ್ಟಗಳನ್ನು ಆಲಿಸಲು ಬರ ಅಧ್ಯಯನ ತಂಡವು ಆಗಮಿಸುತ್ತಿದೆ ಎಂದು ಸಂಯೋಜಕರು, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ತಲೆದೂರಿರುವ ಬರದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಸಹಾ ರಾಜ್ಯದಲ್ಲಿ ಬರದ ಬಗ್ಗೆ ಅಧ್ಯಯನವನ್ನು ಪ್ರಾರಂಭ ಮಾಡಿದೆ. ಈ ಹಿನ್ನಲೆಯಲ್ಲಿ ಜು. ೨೯ ರಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಆಶೋಕ್ ಅವರ ನೇತೃತ್ವದ ತಂಡ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ.
ರೈತರ ಬಿತ್ತನೆಯ ಸ್ಥಿತಿ, ಪ್ರದೇಶ ವೀಕ್ಷಣೆ, ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕರು ಹಾಗೂ ಜಾನುವಾರುಗಳು ಎದುರಿಸುತ್ತಿರುವ ತೊಂದರೆಗಳು, ಆಣೆಕಟ್ಟುಗಳು ಹಾಗೂ ಕೆರೆ-ಕಟ್ಟೆಗಳಲ್ಲಿ ನೀರಿನ ಸ್ಥಿತಿಯನ್ನು ಪರಿಶೀಲಿಸಿ, ರಾಜ್ಯದಲ್ಲಿ ತೀವ್ರವಾಗಿ ಕಾಡುತ್ತಿರುವ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಹಿರಿಯರ ತಂಡವು ಬುಧವಾರ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದೆ ಎಂದರು.
ಇದನ್ನೂ ಓದಿ:
ಜು.೨೯ರ ಬೆಳಿಗ್ಗೆ ೧೦ ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ ಆಗಮಿಸುವ ತಂಡ, ಅಲ್ಲಿನ ಹಳ್ಳಿಗಳಲ್ಲಿನ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ರೈತರೊಂದಿಗೆ ಮಾತುಕಥೆ ನಡೆಸಲಿದೆ. ನಂತರ ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಟಿ ನಡೆಸಲಿದೆ.
ಇದಾದ ಬಳಿಕ ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅನಗೋಡು ಭಾಗದ ರೈತರ ಜಮೀನುಗಳಿಗೆ ಭೇಟಿ ನೀಡಲಿದೆ. ನಂತರ ದಾವಣಗೆರೆಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ, ಜಗಳೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ರೈತರ ಜಮೀನುಗಳಿಗೆ ಭೇಟಿ ನೀಡಿದ ನಂತರ ಬಳ್ಳಾರಿಗೆ ತೆರಳಿ ವಾಸ್ತವ್ಯ ಮಾಡಲಿದೆ ಎಂದು ಕೆ.ಎಸ್.ನವೀನ್ ತಿಳಿಸಿದ್ದಾರೆ.
ಬರ ಮತ್ತು ಅತಿವೃಷ್ಟಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ. ನಮ್ಮ ರೈತರ ಧ್ವನಿಯಾಗಲು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಹಮ್ಮಿಕೊಂಡಿರುವ ಈ ಬರ ಅಧ್ಯಯನ ಕಾರ್ಯಕ್ರಮದ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ರೈತ ಬಾಂಧವರು ಭಾಗವಹಿಸುವಂತೆ ವಿನಂತಿಸಲಾಗಿದೆ.
ಆರ್.ಆಶೋಕ್ ಅವರ ನೇತೃತ್ವದ ತಂಡದಲ್ಲಿ ಶಾಸಕರಾದ ಜನಾರ್ಧನ ರೆಡ್ಡಿ, ಭೈರತಿ ಬಸವರಾಜು, ಡಾ.ಎಂ.ಚಂದ್ರಪ್ಪ, ಬಿ.ಪಿ.ಹರೀಶ್, ಕೃಷ್ಣಾನಾಯಕ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.



