July 28, 2026
Tuesday, July 28, 2026
spot_img

‘ನಮ್ಮ ನೀರು, ನಮ್ಮ ಹಕ್ಕು’: ಕಾವೇರಿ ಆದೇಶದ ವಿರುದ್ಧ ಮಂಡ್ಯದಲ್ಲಿ ಹೋರಾಟ

ಹೊಸದಿಗಂತ ವರದಿ ಮಂಡ್ಯ:

ರೈತರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಯಿಂದ ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ 4 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ನೀಡಿರುವುದನ್ನು ಖಂಡಿಸಿ ನಗರದಲ್ಲಿ ರೈತರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ನಗರದ ಜೆ.ಸಿ. ವೃತ್ತದಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳ ಕಾರ‌್ಯಕರ್ತರು ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿ ವಿನೂತನ ಪ್ರತಿಭಟನೆ ನಡೆಸಿದರೆ, ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳು ಒಣಗಿದ ಕಬ್ಬಿನ ಕಂತೆಗಳನ್ನು ಹಿಡಿದು ಪ್ರತಿಭಟಿಸಿದರು.

ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಳೆ ಬಾರದ ಪರಿಣಾಮ ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳೆ ಒಣಗುತ್ತಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿನ ವಾಸ್ತವ ಸ್ಥಿತಿ ಗತಿಗಳನ್ನು ಅರಿಯದೆ ಕಾವೇರಿ ನೀರು ನಿಯಂತ್ರಣ ಸಮಿತಿ ಅವೈಜ್ಞಾನಿಕವಾಗಿ ಆದೇಶ ನೀಡುವ ಮೂಲಕ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿದೆ.

ಇದನ್ನೂ ಓದಿ:

ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಕ್ಕೆ ಮನ್ನಣೆ ನೀಡಿ ತಮಿಳುನಾಡಿಗೆ ನೀರು ಹರಿಸಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಯಾವುದೇ ಕಾರಣಕ್ಕೂ ನೀರು ಬಿಡಬೇಡಿ. ಕಾವೇರಿ ನೀರು ನಿಯಂತ್ರಣ ಸಮಿತಿ ಅವೈಜ್ಞಾನಿಕವಾಗಿ ಆದೇಶ ನೀಡಿದೆ.

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕುಂಠಿತವಾಗಿದೆ. ವಾಡಿಕೆ ಮಳೆಯೂ ಆಗದೆ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ನೀರು ಬಿಡುವಂತೆ ಆದೇಶ ನೀಡುವುದು ಎಷ್ಟು ಸಮಂಜ ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಕೆ.ಆರ್.ಎಸ್. ಅಥವಾ ಕಾವೇರಿ ಕಣಿವೆಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡದಂತೆ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರನ್ನು ಆಗ್ರಹಿಸಿದ್ದಾರೆ. ಮುಖಂಡರಾದ ಸುಧೀರ್‌ಕುಮಾರ್, ಚಂದ್ರು, ಎಸ್. ನಾರಾಯಣ್, ಸಂದೇಶ್, ಸಿ.ಟಿ. ಮಂಜುನಾಥ್, ನಾಗಣ್ಣಗೌಡ, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !