Wednesday, February 28, 2024

ತವರು ಜಿಲ್ಲೆ ಉಸ್ತುವಾರಿ ನೀಡದಿರುವುದು ಬಿಜೆಪಿ ರಾಷ್ಟ್ರೀಯ ನೀತಿ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಚಿವರ ತವರು ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆಯ ಉಸ್ತುವಾರಿ ಕೊಡುವುದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಯಾರಿಗೂ ಈ ಬಗ್ಗೆ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಗಳ ಉಸ್ತುವಾರಿ ಮಾಡುವುದಕ್ಕೂ ಮೊದಲು ಮಾತಾಡಿದ್ದೇನೆ, ಆ ನಂತರವೂ ಮಾತನಾಡಿದ್ದೇನೆ. ಇದರ ಬಗ್ಗೆ ಎಲ್ಲರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿ ಈ ನೇಮಕ ಮಾಡಲಾಗಿದೆ. ಯಾರಿಗೂ ಸಮಾಧಾನವಿಲ್ಲ, ನಾವೆಲ್ಲರೂ ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಅತ್ಯಂತ ಸೂಕ್ತವಾಗಿ, ಜನರ ಪರವಾಗಿ ಕೆಲಸ ಮಾಡಲು ಎಲ್ಲರೂ ತೀರ್ಮಾನಿಸಿದ್ದೇವೆ. ಈ ಊಹಾಪೋಹಗಳು ವಸ್ತುಸ್ಥಿತಿ ಮತ್ತು ಸತ್ಯಕ್ಕೆ ದೂರವಾಗಿವೆ ಎಂದರು.

ಬಿಜೆಪಿಯಿಂದ ಸಾಕಷ್ಟು ಮಂದಿ ಶಾಸಕರು-ಸಚಿವರು ಕಾಂಗ್ರೆಸ್ ಸೇರುತ್ತಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಸಿಎಂ, ಕಾಂಗ್ರೆಸ್‌ಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂಬುದು ಈ ಮಾತಿಂದಲೇ ಗೊತ್ತಾಗುತ್ತಿದೆ. ಆ ಇಬ್ಬರು ನಾಯಕರಲ್ಲೇ ಫೈಟ್ ಇದೆ. ನನ್ನ ಜೊತೆಗೆ ಇವರಿದ್ದಾರೆ, ನಿನ್ನ ಜೊತೆ ಅವರಿದ್ದಾರೆಂದು ಒಂದೊಂದು ತಿಂಗಳು ಒಂದೊಂದು ಸೀರೀಸ್ ಬರುತ್ತಿದೆ. ಅದರ ಪರಿಣಾಮವಾಗಿ ಇಬ್ಬರೂ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿಯಿಂದ ಯಾರೂ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಬೇಡವೆಂದು ಈಕಡೆಗೆ ಬಂದಿದ್ದಾರೆ. ಕೆಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಕೆಲವೇ ದಿನಗಳನ್ನು ಕಾಯಿರಿ, ಅದರ ಪರಿಣಾಮವನ್ನು ನೀವೇ ನೋಡುತ್ತೀರಿ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಜೈಲು ಲಾಡ್ಜ್‌ನಂತಾಗಿದೆ, ಆರೋಪಿ ಜೆಸಿಬಿ ನಾರಾಯಣ ಪೊಲೀಸರಿಗೆ ಹಣ ನೀಡಿ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿದ್ದಾನೆಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಅಲ್ಲಿ ಏನು ನಡೆದಿದೆ ಎಂಬ ವರದಿಯನ್ನು ತರಿಸಿಕೊಳ್ಳುತ್ತೇನೆ. ಡಿಜಿ ಅವರನ್ನು ಕರೆದು ಮಾತಾಡಿ, ವಸ್ತುಸ್ಥಿತಿಯ ವರದಿ ಪಡೆದು, ಲೋಪವಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!