ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಬೋಳಾರ ಸೀ ಫೇಸ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಸೈಕಲ್ ಟ್ರ್ಯಾಕ್ ಕಾಮಗಾರಿ ಶೇ.68ರಷ್ಟು ಪೂರ್ಣಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕೆಡಿಬಿ ಸಭೆಯಲ್ಲಿ ನೀಡಿರುವ ಹೇಳಿಕೆ ಸರಿಯಲ್ಲ ಎಂದು ರಾಷ್ಟೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಆಕ್ಷೇಪ ವ್ಯಕ್ತಪಡಿಸಿದೆ.
ಕಾಮಗಾರಿ ನಡೆಯುತ್ತಿರುವ ಪ್ರದೇಶವು ನದಿ ಪರಂಬೋಕು ಜಾಗವಾಗಿದ್ದು, ಅಲ್ಲಿ ಕಾನೂನುಬಾಹಿರವಾಗಿ ಶಾಶ್ವತ ನಿರ್ಮಾಣಗಳನ್ನು ಮಾಡಲಾಗಿದೆ. ಈ ಕಾಮಗಾರಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದ್ದು, ಕಾಮಗಾರಿ ಇದೀಗ ಅರ್ಧಂಬರ್ಧ ಸ್ಥಿತಿಯಲ್ಲಿದೆ ಎಂದು ಎನ್‌ಇಸಿಎಫ್ ಗೌರವ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ಪೋರ್ಟ್ ಅಧಿಕಾರಿಗಳು ಈ ಜಾಗವನ್ನು ಸ್ಮಾರ್ಟ್ ಸಿಟಿ ಯೋಜನೆಗಾಗಿ ಅಭಿವೃದ್ಧಿಪಡಿಸಲು ನೀಡಲಾಗಿದೆ ಎಂಬ ರೀತಿಯಲ್ಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಂಗಳೂರು ಪೋರ್ಟ್‌ಗೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆಯಲಾಗಿದೆ.
ಆರ್‌ಟಿಐ ಮೂಲಕ ದೊರೆತ ದಾಖಲೆಗಳ ಪ್ರಕಾರ, ಸಂಬಂಧಪಟ್ಟ ಜಾಗ ತಮ್ಮ ಸ್ವತ್ತಲ್ಲ ಹಾಗೂ ಆ ಜಾಗಕ್ಕೆ ಸಂಬಂಧಿಸಿದ ಆರ್‌ಟಿಸಿ ಅಥವಾ ಸ್ಕೆಚ್ ತಮ್ಮ ಬಳಿ ಇಲ್ಲ ಎಂದು ಮಂಗಳೂರು ಪೋರ್ಟ್ ತಿಳಿಸಿದೆ ಎಂದು ಅವರು ಹೇಳಿದ್ದಾರೆ. ಹೀಗಿರುವಾಗ ಕಾಮಗಾರಿಗೆ ಸಂಬಂಧಿಸಿದ ಭೂಮಿಯ ಹಕ್ಕು ಮತ್ತು ದಾಖಲೆಗಳ ಕುರಿತು ಸ್ಪಷ್ಟತೆ ಇಲ್ಲದಿರುವಾಗ, ಕಾಮಗಾರಿ ಶೇ.68ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿರುವುದು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿದಂತಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಮಗಾರಿಯ ಭೂಮಿಯ ಹಕ್ಕು, ದಾಖಲೆಗಳು ಹಾಗೂ ಕಾಮಗಾರಿ ಕೈಗೊಂಡಿರುವ ಕಾನೂನುಬದ್ಧತೆಯ ಕುರಿತು ಸ್ಪಷ್ಟೀಕರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪತ್ರದ ಪ್ರತಿಯನ್ನೂ ಬಿಡುಗಡೆ ಮಾಡಲಾಗಿದೆ.



