ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಫ್ತಾಬ್ ಶಿವ್ದಾಸನಿ (Aftab Shivdasani) ಸೈಬರ್ ವಂಚನೆಗೊಳಗಾಗಿದ್ದು, 1.50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಬ್ಯಾಂಕ್‌ಗೆ ಸಂಬಂಧಿಸಿದ ಕೆವೈಸಿ ಡೇಟಾವನ್ನು ಅಪ್ಡೇಟ್ ಮಾಡುವಂತೆ ಮೊಬೈಲ್ ಮೆಸೇಜ್ ಸ್ವೀಕರಿಸಿದ ನಂತರ ಅವರು 1.50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಬಾಂದ್ರಾ ಪೊಲೀಸ್ ಠಾಣಾಧಿಕಾರಿಯ ನೀಡಿದ ಮಾಹಿತಿ ಪ್ರಕಾರ, ಘಟನೆ ಭಾನುವಾರ ಸಂಭವಿಸಿದೆ. ಸೋಮವಾರ ಪ್ರಕರಣ ದಾಖಲಾಗಿದೆ.
ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಬಂದಿದ್ದು, ಬ್ಯಾಂಕ್‌ಗೆ ಲಿಂಕ್ ಮಾಡಲಾದ ಕೆವೈಸಿ ಮಾಹಿತಿಯನ್ನು ಅಪ್ಡೇಟ್ ಮಾಡುವಂತೆ ಮೆಸೇಜ್ನಲ್ಲಿ ಸೂಚಿಸಲಾಗಿದೆ. ವಿವರಗಳನ್ನು ನವೀಕರಿಸದಿದ್ದರೆ ಬ್ಯಾಂಕ್ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಅಫ್ತಾಬ್ ಶಿವ್ದಾಸನಿ ಅವರು ಸ್ವೀಕರಿಸಿದ ಸಂದೇಶದಲ್ಲಿದ್ದ ಯುಆರ್ಎಲ್ (URL) ಕ್ಲಿಕ್ ಮಾಡಿ ಅದರಲ್ಲಿದ್ದ ಸೂಚನೆಗಳನ್ನು ಅನುಸರಿಸಿದ್ದಾರೆ. ಬಳಿಕ ನಟ ತನ್ನ ಅಕೌಂಟ್ನಲ್ಲಿದ್ದ 1,49,999 ರೂ. ಡಿಡಕ್ಟೆಡ್ (ಕಡಿತಗೊಳಿಸಲಾಗಿದೆ) ಎಂಬ ಟೆಕ್ಸ್ಟ್ ಮೆಸೇಜ್ ಸ್ವೀಕರಿಸಿದ್ದಾರೆ.
ಅಧಿಕಾರಿಗಳ ಮಾಹಿತಿಯಂತೆ, ಅಫ್ತಾಬ್ ಶಿವ್ದಾಸನಿ ಸೋಮವಾರ ಬ್ಯಾಂಕ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ, ಅವರ ಸಲಹೆಯ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) 420 (ವಂಚನೆ), ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.