ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕರಿಷ್ಮಾ ತನ್ನಾ ತಮ್ಮ ಪತಿ ಮಂಗಳೂರಿನ ವರುಣ್ ಬಂಗೇರ ಅವರ ನಾಡಿನ ತುಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಆಚರಿಸಿಕೊಂಡಿದ್ದು, ಅದರ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಶೇಷ ಕ್ಷಣವನ್ನು ಕುಟುಂಬದವರ ಹಾಗೂ ಆಪ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ.
ಗುಜರಾತಿ ಮೂಲದ ಕರಿಷ್ಮಾ ತನ್ನಾ ದಕ್ಷಿಣ ಭಾರತೀಯ ಶೈಲಿಯ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ಸಂಪ್ರದಾಯಬದ್ಧ ಆಭರಣಗಳು ಹಾಗೂ ಸಾಂಸ್ಕೃತಿಕ ಅಲಂಕಾರ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ತುಳುನಾಡಿನ ಆಚರಣೆಗಳಿಗೆ ತಕ್ಕಂತೆ ಭಜನೆ, ಮಂತ್ರೋಚ್ಚಾರಣೆ ಹಾಗೂ ಕುಟುಂಬ ಸಂಪ್ರದಾಯಗಳ ನಡುವೆ ಸೀಮಂತ ನೆರವೇರಿತು.
ಇದನ್ನೂ ಓದಿ:
ಮಂಗಳೂರಿನ ಸಂಸ್ಕೃತಿಗೆ ಮೆಚ್ಚುಗೆ
ವರುಣ್ ಬಂಗೇರ ಮಂಗಳೂರಿನವರಾಗಿರುವ ಹಿನ್ನೆಲೆ, ಅವರ ಕುಟುಂಬದ ಸಂಪ್ರದಾಯದಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತುಳು ಸಂಸ್ಕೃತಿಯ ವೈಶಿಷ್ಟ್ಯಗಳು ಮತ್ತು ಕುಟುಂಬ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡಿರುವ ಕರಿಷ್ಮಾ ತನ್ನಾ, ‘ಅಪ್ಪ-ಅಮ್ಮ’ ಎಂಬ ಭಾವುಕ ಶೀರ್ಷಿಕೆಯನ್ನು ಬರೆದುಕೊಂಡಿದ್ದು, ಈ ಕ್ಷಣವನ್ನು ತಮ್ಮ ಬದುಕಿನ ವಿಶೇಷ ನೆನಪಾಗಿ ವರ್ಣಿಸಿದ್ದಾರೆ. ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರ ಅವರು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ಜೋಡಿ, ಇದೀಗ ತಮ್ಮ ಮೊದಲ ಮಗುವಿನ ಆಗಮನದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ಬಾಲಿವುಡ್ ಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು OTT ಸರಣಿಗಳ ಮೂಲಕ ಜನಪ್ರಿಯತೆ ಪಡೆದಿರುವ ಕರಿಷ್ಮಾ ತನ್ನಾ, ‘ಸಂಜು’, ‘ಗ್ರ್ಯಾಂಡ್ ಮಸ್ತಿ’ ಹಾಗೂ ಹಲವು ಜನಪ್ರಿಯ ಯೋಜನೆಗಳ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದಾರೆ.



