ಸಂಕಷ್ಟದಲ್ಲಿದೆ ಬಾಲಿವುಡ್‌: ʼಕ್ಯಾಟ್‌ʼ ಹೊಸ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಲಿವುಡ್‌ ಗೆ ಅಂಟಿಕೊಂಡಿರುವ ಗ್ರಹಣಕಾಲ ಇನ್ನೂ ಸರಿಯಾದಂತೆ ತೋರುತ್ತಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಒಂದಾಂದ ನಂತರ ಒಂದರಂತೆ ಹೈ ಬಜೆಟ್‌ ಬಾಲಿವುಡ್‌ ಚಿತ್ರಗಳೆಲ್ಲವೂ ನೆಲಕಚ್ಚುತ್ತಿವೆ. ದೊಡ್ಡ ದೊಡ್ಡ ಸ್ಟಾರ್ ಗಳ ಇರುವಿಕೆಯ ಹೊರತಾಗಿಯೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಇದು ದೀಪಾವಳಿ ಹಬ್ಬದ ನಂತರವೂ ಮುಂದುವರೆದಿದ್ದು ನಿನ್ನೆಯಷ್ಟೇ ಬಿಡುಗಡೆಯಾದ ಬಾಲಿವುಡ್‌ ಬೆಡಗಿ ಕತ್ರೀನಾ ಕೈಫ್‌ ಅಭಿನಯದ ʼಫೋನ್‌ ಭೂತ್‌ʼ ಚಿತ್ರ ಮೊದಲ ದಿನವೇ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.

ಕತ್ರಿನಾ ಕೈಫ್, ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅಭಿನಯದ ಫೋನ್ ಭೂತ್ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕಡಿಮೆ ಸಂಖ್ಯೆಯನ್ನು ದಾಖಲಿಸಿದೆ. ಶುಕ್ರವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತದಲ್ಲಿ ಮೊದಲ ದಿನ ಕೇವಲ 2.05 ಕೋಟಿ ರೂ. ಗಳಿಸಿದೆ. ಹಾರರ್‌ – ಕಾಮಿಡಿ ಜಾನರ್‌ ಹೊಂದಿರುವ ಈ ಚಿತ್ರವನ್ನು ಗುರ್ಮೀತ್‌ ಸಿಂಗ್‌ ನಿರ್ದೇಶಿಸಿದ್ದು ಜಾಕಿಶ್ರಾಫ್‌ ಕೂಡ ಚಿತ್ರದ ಭಾಗವಾಗಿದ್ದಾರೆ. ಕಳೆದ ತಿಂಗಳು ಬಿಡುಗಡೆಯಾಗಿದ್ದ ʼಕಿನ್ನಾ ಸೋನಾʼ ಸಾಂಗ್‌ ಯೂಟ್ಯೂಬ್‌ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹಿಟ್‌ ಆಗಿದ್ದು ಚಿತ್ರದ ಕುರಿತಾಗಿ ಕೆಲಮಟ್ಟಿಗಿನ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಆದರೆ ಪರದೆಯ ಮೇಲೆ ಕಮಾಲ್‌ ಮಾಡುವಲ್ಲಿ ಚಿತ್ರ ಸೋತಿದೆ ಎಂಬುದನ್ನು ಮೊದಲ ದಿನ ಕಲೆಕ್ಷನ್‌ ತೋರಿಸುತ್ತಿದೆ.

ಚಿತ್ರವನ್ನು ವೀಕ್ಷಸಿದ ಕೆಲವರು ನೆಗೆಟಿವ್‌ ರಿವ್ಯೂ ನೀಡಿದ್ದು ಚಿತ್ರವು ಸುಮ್ಮನೆ ಟೈಮ್‌ ವೇಸ್ಟ್‌ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಸ್ಟಾರ್‌ ಗಳ ಇರುವಿಕೆ ಮುಖ್ಯವಲ್ಲ, ಉತ್ತಮ ಕಂಟೆಂಟ್‌ ಚಿತ್ರವನ್ನು ಗೆಲ್ಲಿಸುತ್ತದೆ ಎಂಬುದನ್ನು ವಿಕ್ರಮ್‌, ವಿಕ್ರಾಂತ್‌ ರೋಣ, ಕಾಂತಾರದಂತಹ ಚಿತ್ರಗಳು ಸಾಧಿಸಿ ತೋರಿಸಿರುವಾಗ ಬಾಲಿವುಡ್‌ ಇನ್ನೂ ಹಳೆಯ ಮಾದರಿಯಲ್ಲಿಯೇ ಚಿತ್ರ ನಿರ್ಮಿಸುತ್ತಿರುವುದು ಬಾಲಿವುಡ್‌ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!