ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ನಗರದ ಹಲವು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಕಸ್ತೂರಿನಗರ, ಜ್ಞಾನಭಾರತಿ, ತಲಘಟ್ಟಪುರ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಹಲವು RTO ಕಚೇರಿಗಳಿಗೆ ಏಕಕಾಲದಲ್ಲಿ ಬೆದರಿಕೆ ಸಂದೇಶ ರವಾನೆಯಾಗಿದ್ದು, ಇಮೇಲ್‌ನಲ್ಲಿ ಸ್ಫೋಟ ನಡೆಯಲಿದೆ ಎಂದು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.
ಈ ಮಾಹಿತಿ ಸಿಕ್ಕ ತಕ್ಷಣ ಕಚೇರಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಗಳಿಗೆ ಧಾವಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಗಳಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಬಳಿಕ RTO ಕಚೇರಿಗಳ ಪ್ರತಿಯೊಂದು ಕೊಠಡಿ, ವಾಹನ ನಿಲುಗಡೆ ಪ್ರದೇಶ, ದಾಖಲೆ ವಿಭಾಗ ಸೇರಿದಂತೆ ಸಂಪೂರ್ಣ ಆವರಣವನ್ನು ತಪಾಸಣೆ ಮಾಡಲಾಯಿತು. ಕೆಲ ಗಂಟೆಗಳ ಕಾಲ ನಡೆದ ತೀವ್ರ ಶೋಧ ಕಾರ್ಯಾಚರಣೆಯ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಇದನ್ನೂ ಓದಿ:
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದ್ದು, ಸೈಬರ್ ಕ್ರೈಂ ಪೊಲೀಸರು ಇಮೇಲ್ ಮೂಲವನ್ನು ಪತ್ತೆಹಚ್ಚಲು ತಾಂತ್ರಿಕ ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಸಂದೇಶ ಯಾವ ಸರ್ವರ್‌ನಿಂದ ಬಂದಿದೆ? ಸ್ಥಳೀಯವಾಗಿ ಕಳುಹಿಸಲಾಗಿದೆಯೇ ಅಥವಾ ವಿದೇಶಿ ಜಾಲದ ಮೂಲಕ ಬಂದಿದೆಯೇ? ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೇಶದ ಹಲವು ನಗರಗಳಲ್ಲಿ ಶಾಲೆಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ RTO ಕಚೇರಿಗಳು ಗುರಿಯಾಗಿರುವುದು ಭದ್ರತಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



