SHOCKING | ಮಡಿಕೇರಿಯಲ್ಲಿ ಹುಲಿ ದಾಳಿಗೆ ಬಾಲಕ ಸೇರಿ ಇಬ್ಬರು ಬಲಿ

ಹೊಸದಿಗಂತ ವರದಿ ಮಡಿಕೇರಿ:

ಹುಲಿ ದಾಳಿಗೆ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿರುವ ಘಟನೆ ದಕ್ಷಿಣ ಕೊಡಗಿನ ಕುಟ್ಟ ಬಳಿ ನಡೆದಿದೆ.ಕುಟ್ಟ ಸಮೀಪದ ಕೆ.ಬಾಡಗ ಗ್ರಾಮದ ಚೂರಿಕಾಡು ಎಂಬಲ್ಲಿ ಭಾನುವಾರ ಸಂಜೆ ಚೇತನ್ ಎಂಬ ಬಾಲಕ ಹುಲಿ ದಾಳಿಗೆ ಬಲಿಯಾಗಿದ್ದು, ಸೋಮವಾರ ಮುಂಜಾನೆ 75 ವರ್ಷ ಪ್ರಾಯದ ವೃದ್ದರನ್ನು ಬಲಿ ತೆಗೆದುಕೊಂಡಿದೆ.

ಮೃತ ಬಾಲಕ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯವನೆಂದು ತಿಳಿದುಬಂದಿದ್ದು, ಚೂರಿಕಾಡು ಗ್ರಾಮದ ನೆಲ್ಲೀರ ಪೂಣಚ್ಚ ಎಂಬವರ ಮನೆಗೆ ಕೂಲಿ ಕೆಲಸಕ್ಕೆಂದು ಈತನ ಪೋಷಕರು ಆಗಮಿಸಿದ್ದರೆನ್ನಲಾಗಿದೆ.
ಭಾನುವಾರ ಸಂಜೆ 4ಗಂಟೆ ಸುಮಾರಿಗೆ ಕಾಫಿ ತೋಟದ ಒಳಗೆ ಆಟವಾಡುತ್ತಿದ್ದ ಚೇತನ್ ಮೇಲೆ ಹುಲಿ ದಾಳಿ ನಡೆಸಿ ಆತನನ್ನು ಸಾಯಿಸಿರುವುದಾಗಿ ಹೇಳಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಬಾಲಕನ ಮೃತದೇಹವನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಮವಾರ ಮುಂಜಾನೆ ಅದೇ ಗ್ರಾಮದಲ್ಲಿ 75ವರ್ಷದ ವೃದ್ಧ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಕೆಲಸಕ್ಕೆಂದು ತೆರಳಲು ಲೈನ್’ಮನೆಯಿಂದ ಹೊರ ಬರುತ್ತಿದ್ದಂತೆ ವೃದ್ಧನ ಮೇಲೆ ಹುಲಿ ಎರಗಿದ್ದು, ಆತ ಕೂಡಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಈ ಘಟನೆಗಳಿಂದ ಕುಟ್ಟ ಭಾಗದ ಜನತೆ ಭಯಬೀತರಾಗಿದ್ದು, ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯ ಅಸಹಾಯಕತೆಯ ವಿರುದ್ದ ಪ್ರತಿಭಟನೆ ನಡೆಸಲು ಕಾಫಿ ಬೆಳೆಗಾರರು, ಕಾರ್ಮಿಕರು ಸಜ್ಜಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!