August 24, 2026
Monday, August 24, 2026
spot_img

ಟಿ20 ಲೀಗ್‌ಗಳ ಆಮಿಷಕ್ಕೆ ಬ್ರೇಕ್! ಕಮ್ಮಿನ್ಸ್ ನಾಯಕತ್ವ ಉಳಿಸಿಕೊಳ್ಳಲು ಆಸೀಸ್ ಮಂಡಳಿ ಹರಸಾಹಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಪ್ಯಾಟ್ ಕಮ್ಮಿನ್ಸ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ಈಗ ಭಾರೀ ಮೊತ್ತದ ಹೂಡಿಕೆಗೆ ಮುಂದಾಗಿದೆ. ವರದಿಗಳ ಪ್ರಕಾರ, ಕಮ್ಮಿನ್ಸ್ ಅವರನ್ನು ಕೇವಲ ಟೆಸ್ಟ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಸೀಮಿತಗೊಳಿಸಲು ಮಂಡಳಿಯು ಬರೋಬ್ಬರಿ ₹113 ಕೋಟಿ ಮೌಲ್ಯದ ದೀರ್ಘಕಾಲದ ಒಪ್ಪಂದವನ್ನು ಪ್ರಸ್ತಾಪಿಸಿದೆ.

ಕಳೆದ ವರ್ಷ ಐಪಿಎಲ್ ಮೂಲದ ಫ್ರಾಂಚೈಸಿಯೊಂದು ಕಮ್ಮಿನ್ಸ್ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ, ಕೇವಲ ಜಾಗತಿಕ ಟಿ20 ಲೀಗ್‌ಗಳಲ್ಲಿ ಆಡಲು ವರ್ಷಕ್ಕೆ ಸುಮಾರು ₹55 ಕೋಟಿ ಆಫರ್ ನೀಡಿತ್ತು ಎನ್ನಲಾಗಿದೆ. ಈ ರೀತಿಯ ‘ಮಾರುಕಟ್ಟೆ ಒತ್ತಡ’ದಿಂದಾಗಿ ಸ್ಟಾರ್ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಪ್ರಮುಖ ಆಟಗಾರನನ್ನು ಉಳಿಸಿಕೊಳ್ಳಲು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.

ವಿಶೇಷವೆಂದರೆ, ಈ 113 ಕೋಟಿ ರೂಪಾಯಿ ವೇತನವು ಕಮ್ಮಿನ್ಸ್ ಆಡುವ ಪಂದ್ಯಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ. ಬದಲಿಗೆ, ಇದು ಅವರ ಒಪ್ಪಂದದ ಖಾತರಿಪಡಿಸಿದ ಮೊತ್ತವಾಗಿದ್ದು, ಅವರಿಗೆ ಸಂಪೂರ್ಣ ಆರ್ಥಿಕ ಭದ್ರತೆ ಒದಗಿಸಲಿದೆ. ಆಸ್ಟ್ರೇಲಿಯಾ ತಂಡಕ್ಕೆ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಕಮ್ಮಿನ್ಸ್ ಅವರ ನಾಯಕತ್ವ ಅತ್ಯಗತ್ಯವಾಗಿರುವುದರಿಂದ ಈ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿರುವ ಕಮ್ಮಿನ್ಸ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವು ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯದ ನಂತರ ಮಾತನಾಡಿದ ಕಮ್ಮಿನ್ಸ್, ತಂಡದ ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಈ ನಡೆಯು ಅಂತರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !