October 7, 2026
Wednesday, October 7, 2026
spot_img

‘ಸತ್ಯ ನಮ್ಮೊಂದಿಗಿದೆ, ನಮ್ಮ ಧೈರ್ಯ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ’: ಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ‘ಇಂಡಿಯಾ’ ಒಕ್ಕೂಟದ ಸಂಸದರನ್ನು ದೆಹಲಿ ಪೊಲೀಸರು ನಡೆಸಿಕೊಂಡ ರೀತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸತ್ಯ ನಮ್ಮ ಪರವಾಗಿದೆ. ನೀವು ಎಷ್ಟೇ ಬಲಪ್ರಯೋಗ ಮಾಡಿದರು ನಮ್ಮ ಧೈರ್ಯ ಕುಗ್ಗಿಸಲು ಸಾಧ್ಯವಿಲ್ಲʼ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಪ್ರಜಾಪ್ರಭುತ್ವದ ಹಕ್ಕಿನ ಮೇಲಿನ ದಾಳಿ

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, ‘ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಒಕ್ಕೂಟದ ಇತರ ನಾಯಕರನ್ನು ದೆಹಲಿ ಪೊಲೀಸರು ಎಳೆದಾಡಿ, ಅಮಾನುಷವಾಗಿ ನಡೆಸಿಕೊಂಡಿರುವ ಶೈಲಿಯನ್ನು ನಾನು ಖಂಡಿಸುತ್ತೇನೆ. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ಪ್ರಶ್ನಿಸುವುದು, ಉತ್ತರದಾಯಿತ್ವವನ್ನು ಕೇಳುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಮೂಲಭೂತ ಪ್ರಜಾಪ್ರಭುತ್ವದ ಹಕ್ಕಾಗಿದೆ’ ಎಂದು ಹೇಳಿದ್ದಾರೆ.

ಮಹಿಳಾ ನಾಯಕಿಯರನ್ನು ನಡೆಸಿಕೊಂಡ ರೀತಿಗೆ ಖಂಡನೆ

ಪ್ರತಿಭಟನೆ ವೇಳೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ಮಹಿಳಾ ನಾಯಕಿಯರನ್ನು ಪೊಲೀಸರು ನಡೆಸಿಕೊಂಡ ರೀತಿ ಆಘಾತಕಾರಿಯಾಗಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಜನಪ್ರತಿನಿಧಿಗಳ ಮೇಲೆ ಇಷ್ಟು ಕಠೋರವಾಗಿ ಬಲಪ್ರಯೋಗ ಮಾಡುವುದು ಸರಿಯಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನಾಗರಿಕರ ಮತಗಳ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರವು ಪಾರದರ್ಶಕವಾಗಿ ಉತ್ತರ ನೀಡಬೇಕೇ ಹೊರತು, ಪೊಲೀಸರನ್ನು ಬಿಟ್ಟು ಇಂತಹ ದೌರ್ಜನ್ಯ ನಡೆಸಬಾರದು’ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ:

ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ

ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದರಿಂದ ಎಂದಿಗೂ ಪ್ರಜಾಪ್ರಭುತ್ವ ಬಲಗೊಳ್ಳುವುದಿಲ್ಲ ಎಂದು ಕೇಂದ್ರಕ್ಕೆ ಎಚ್ಚರಿಸಿರುವ ಡಿ.ಕೆ. ಶಿವಕುಮಾರ್, ಅಧಿಕಾರದಲ್ಲಿರುವವರು ಜನರ ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಧೈರ್ಯವನ್ನು ಹೊಂದಿದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ನಮ್ಮ ಸಿದ್ಧಾಂತ ಮತ್ತು ಬದ್ಧತೆ ಅತ್ಯಂತ ದೃಢವಾಗಿದೆ. ದೇಶದ ಜನರ ಪ್ರತಿ ಮತದ ಪವಿತ್ರತೆಯನ್ನು ಮತ್ತು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ರಕ್ಷಿಸಲು ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Must Read