ಸಬ್ಸಿಡಿ ಹಣಕ್ಕಾಗಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಮಹಿಳಾ ಸಿಬ್ಬಂದಿ

ಹೊಸದಿಗಂತ ವರದಿ ಮಡಿಕೇರಿ:

ಟ್ಯಾಕ್ಸಿ ಕಾರಿನ ಸಬ್ಸಿಡಿ ಹಣ ಮಂಜೂರಾತಿಗಾಗಿ ವ್ಯಕ್ತಿಯೊಬ್ಬರಿಂದ 10 ಸಾವಿರ ರೂ. ನಗದು ಸ್ವೀಕರಿಸುತ್ತಿದ್ದ ಸಂದರ್ಭ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಹಿಳಾ ಸಿಬ್ಬಂದಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ನಿಗಮದ ಹೊರ ಗುತ್ತಿಗೆ ಸಿಬ್ಬಂದಿ ಪ್ರಥಮ ದರ್ಜೆ ಸಹಾಯಕಿ ಹುದ್ದೆಯ ಲತಾ ಎಂಬವರೇ ಲೋಕಾಯುಕ್ತರು ವಶಕ್ಕೆ ಪಡೆದ ಆರೋಪಿಯಾಗಿದ್ದಾರೆ.
ಸೋಮವಾರಪೇಟೆ ನಿವಾಸಿ ಲತೀಫ್ ಎಂಬವರು ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಟ್ಯಾಕ್ಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಟ್ಯಾಕ್ಸಿಗೆ ಒಟ್ಟು 2.50 ಲಕ್ಷ ರೂ.ಗಳ ಸಬ್ಸಿಡಿ ಕೂಡಾ ಲಭ್ಯವಿದ್ದು, ಸಬ್ಸಿಡಿಗೆ ತಮ್ಮನ್ನು ಪರಿಗಣಿಸುವಂತೆ ಲತೀಫ್ ಅರ್ಜಿ ಮೂಲಕ ಮನವಿ ಮಾಡಿದ್ದರು. ಸಬ್ಸಿಡಿ ಹಣದ ಮಂಜೂರಾತಿ ಪಟ್ಟಿಯಲ್ಲಿ ಹೆಸರು ನಮೂದಾಗುವಂತೆ ಮಾಡಲು ಶೇ.10ರಂತೆ ಹಣ ನೀಡಬೇಕೆಂದು ಲತಾ ಅವರು ಲತೀಫ್’ಗೆ ತಿಳಿಸಿದ್ದರು ಎನ್ನಲಾಗಿದೆ.
ಒಟ್ಟು 20 ಸಾವಿರ ರೂ.ಗಳಿಗೆ ಮಾತುಕತೆ ನಡೆದು 2 ಕಂತುಗಳಲ್ಲಿ ಹಣ ನೀಡುವಂತೆ ಲತಾ ಹೇಳಿದ್ದರಲ್ಲದೆ, ಮೊದಲ ಕಂತು 10 ಸಾವಿರ ನೀಡಿದ 3 ದಿನಗಳಲ್ಲಿ 2ನೇ ಕಂತು ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದ ಯೋಜನೆಯ ಫಲಾನುಭವಿ ಲತೀಫ್ ಕೊಡಗು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರಂತೆ ಮೊದಲ ಕಂತು ಹಣ 10 ಸಾವಿರ ರೂ.ಗಳನ್ನು ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ನಗದು ಸಹಿತ ಹೊರ ಗುತ್ತಿಗೆ ಸಿಬ್ಬಂದಿ ಲತಾ ಅವರನ್ನು ವಶಕ್ಕೆ ಪಡೆದರು.
ಮಡಿಕೇರಿ ಲೋಕಾಯುಕ್ತ ವೃತ್ತ ನಿರೀಕ್ಷಕ ಲೋಕೇಶ್, ಮೈಸೂರು ಲೋಕಾಯುಕ್ತದ ವೃತ್ತ ನಿರೀಕ್ಷಕಿ ಜಯರತ್ನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!