ನೇತಾಜಿ ಅಸ್ಥಿಯನ್ನು ವಾಪಸ್‌ ತರುವಂತೆ ಮೊಮ್ಮಗನಿಂದ ಮೋದಿಗೆ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

1945ರಲ್ಲಿ ವಿಮಾನ ಅಪಘಾತದಲ್ಲಿ ಮರಣಹೊಂದಿದಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರ ಹಾಗೂ ಐಎನ್‌ಎ ಸಂಸ್ಥಾಪಕ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಅಸ್ಥಿಯನ್ನು ಭಾರತಕ್ಕೆ ವಾಪಸ್‌ ತರುವಂತೆ ಕೋರಿ ಬೋಸ್‌ ಅವರ ಮೊಮ್ಮಗ ಚಂದ್ರಕುಮಾರ್‌ ಬೋಸ್‌ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

“ವಿಜಯಶಾಲಿ ಸೇನೆಯ ಮುಖ್ಯಸ್ಥರಾಗಿ ಸ್ವತಂತ್ರ ಭಾರತಕ್ಕೆ ಮರಳುವುದು ನೇತಾಜಿಯವರ ಮಹತ್ವಾಕಾಂಕ್ಷೆಯಾಗಿತ್ತು. ಅದಕ್ಕೆ ಸಂದರ್ಭಗಳು ಅವಕಾಶ ನೀಡಲಿಲ್ಲ. ಈ ವರ್ಷ ನೇತಾಜಿಯವರ 125ನೇ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಅಸ್ಥಿಯನ್ನು ಭಾರತಕ್ಕೆ ವಾಪಸ್‌ ತಂದು ಅವರು ಈ ನೆಲದಲ್ಲೇ ವಿಶ್ರಾಂತಿ ಪಡೆಯುವಂತೆ ಮಾಡುವ ಮೂಲಕ ಅವರ ಆಸೆಯನ್ನು ಈಡೇರಿಸಬೇಕು. ಜಪಾನ್‌ನ ರಿಂಕೋಜಿ ದೇವಸ್ಥಾನದಲ್ಲಿ ನೇತಾಜಿಯವರ ಚಿತಾ ಭಸ್ಮವನ್ನು ಇರಿಸಲಾಗಿದೆ. ಅದು ನೇತಾಜಿಯವರದೇ ಖಚಿತವಾಗಿದೆ ಎಂದು ಹೇಳಲಾಗುತ್ತದೆ.  ಅದರ ನಿರ್ವಹಣೆಗೆ ಸರ್ಕಾರವೇ ವೆಚ್ಚ ಭರಿಸುತ್ತಿದೆ. ಆ ಬೂದಿಯು ಡಿಎನ್‌ಎ ಟೆಸ್ಟ್‌ ಗೆ ಒಳಪಟ್ಟಿರುವುದನ್ನು ಸರ್ಕಾರವು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೇತಾಜಿಯವರ ಚಿತಾ ಭಸ್ಮವನ್ನು ವಾಪಸ್ಸು ತರುವ ಮೂಲಕ ಅವರ ಪುತ್ರಿ ಅನಿತಾ ಬೋಸ್ ಅವರಿಗೆ ನೇತಾಜಿಯವರ ಅಂತಿಮ ವಿಧಿವಿಧಾನಗಳನ್ನು ಮಾಡಲು ಮತ್ತು ಶ್ರದ್ಧಾಂಜಲಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿರುವ ಅವರು “ಅವರ ಸಾವಿನ ಕುರಿತು ತನಿಖೆ ನಡೆಸಲು ಈಗಾಗಲೇ ಮೂರು ಆಯೋಗಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಎರಡು ಆಯೋಗವು ವಿಮಾನ ದುರಂತದಲ್ಲೇ ಸಾವನ್ನಪ್ಪಿದ್ದಾರೆ ಎಂದು ತೀರ್ಮಾನಿಸಿದೆ. ಆದರೆ 1999ರಲ್ಲಿ ರಚನೆಗೊಂಡ ಮುಖರ್ಜಿ ಆಯೋಗವು ಅದನ್ನು ಒಪ್ಪಿಕೊಂಡಿಲ್ಲ. 1945 ರಂದು ತೈಪೆಯಲ್ಲಿ ನಡೆದ ವಿಮಾನ ದುರಂತದಲ್ಲಿ ನೇತಾಜಿಯವರ ಸಾವಿನ ಕುರಿತು ಹಲವು ಗೊಂದಲಗಳಿವೆ ಈ ಕುರಿತು 2017ರಲ್ಲಿ ಕೇಂದ್ರ ಸರ್ಕಾರವೂ ಕೂಡ ವಿಮಾನ ದುರಂತದಲ್ಲೇ ಸಾವನ್ನಪ್ಪಿದೆ ಎಂದು ಹೇಳಿದೆ” ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಮುಂದುವರಿದು ಇಲ್ಲಿಯವರೆಗೂ ಸರ್ಕಾರವು ಅಗಸ್ಟ್‌ 18, 1945 ರಂದು ನಡೆದ ಅವರ ಸಾವಿನ ಕುರಿತು ಸ್ಪಷ್ಟವಾಗಿ ವಿವರಣೆ ನೀಡಿಲ್ಲ. ಏಕೆಂದರೆ ಅದರಿಂದ ಯಾವುದೇ ರಾಜಕೀಯ ಲಾಭಗಳಿಲ್ಲ ಎಂದು ಮುಚ್ಚಿಟ್ಟದಾಖಲೆಗಳು ಹೇಳುತ್ತವೆ ಎಂದಿರುವ ಅವರು “ಸರ್ಕಾರಗಳ ಈ ವಿಳಂಬ ಪ್ರಜ್ಞೆಯಿಂದಲೇ ಈಗಲೂ ಕೂಡ ನೇತಾಜಿಯವರ ಸಾವಿನ ಕುರಿತು ಹಲವು ವಿಲಕ್ಷಣ ಕಥೆಗಳು, ಊಹಾಪೋಹಗಳಿಂದ ನಿರ್ಮಿತವಾಗಿರುವ ಚಲನ ಚಿತ್ರಗಳು ಪ್ರಸಾರವಾಗುತ್ತಿವೆ. ಇದರಿಂದಾಗಿ ನೇತಾಜಿಯವರ ಖ್ಯಾತಿಗೆ ಧಕ್ಕೆಯುಂಟಾಗುತ್ತಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!