May 9, 2026
Saturday, May 9, 2026
spot_img

ಶಿಕಾರಿಪುರದಿಂದ ವಿಧಾನಸೌಧದವರೆಗೆ.. ಬಿಎಸ್‌ವೈ 5 ದಶಕಗಳ ರಾಜಕೀಯ ಪಯಣದ ಐತಿಹಾಸಿಕ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ಇಂದು ಚಿತ್ರದುರ್ಗದಲ್ಲಿ ಬೃಹತ್ “ಯಡಿಯೂರಪ್ಪ ಅಭಿಮಾನೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಅದೇ ರೀತಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಭಾಗವಹಿಸುತ್ತಿದ್ದಾರೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಸುಮಾರು 1000ಕ್ಕೂ ಹೆಚ್ಚು ಮಠಾಧೀಶರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿರಲಿದ್ದಾರೆ. ಪ್ರಮುಖವಾಗಿ ಸುತ್ತೂರು ಮಠ, ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠದ ಶ್ರೀಗಳು ಸೇರಿದಂತೆ ಪಂಚಪೀಠದ ಸ್ವಾಮೀಜಿಗಳು ಪಾಲ್ಗೊಳ್ಳುತ್ತಿದ್ದಾರೆ.

ಇನ್ನು, ಬಿಜೆಪಿ ನಾಯಕರಾದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮತ್ತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಆಗಮಿಸುತ್ತಿದ್ದಾರೆ. ಗೋವಿಂದ ಕಾರಜೋಳ ಡಾ. ಪ್ರಭಾಕರ್ ಕೋರೆ, ಬಿ. ಶ್ರೀರಾಮುಲು, ಸಿ.ಟಿ. ರವಿ ಮುಂತಾದ ಹಿರಿಯ ನಾಯಕರು ಉಪಸ್ಥಿತರಿರಲಿದ್ದಾರೆ.

ಬಿಎಸ್‌ವೈ ರಾಜಕೀಯ ಜೀವನ:
1972ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನಸಂಘದ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ಇವರು ನಂತರ 1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ, 1977ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಇವರು, ಶಿಕಾರಿಪುರ ಕ್ಷೇತ್ರದಿಂದ ಒಟ್ಟು 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಹಾಗೂ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರೈತ ಪರ ಹೋರಾಟಗಳು, ಬಗರ್ ಹುಕುಂ ಸಾಗುವಳಿ ಸಕ್ರಮಕ್ಕಾಗಿ ಪಾದಯಾತ್ರೆ ಮತ್ತು ಜನಪದ ನಾಯಕನಾಗಿ ಇವರು ಗುರುತಿಸಿಕೊಂಡಿದ್ದಾರೆ.

ಇವರ ಈ ಸುದೀರ್ಘ ರಾಜಕೀಯ ಪಯಣದ ಸಾಕ್ಷಿಯಾಗಿ ಇಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಬಳಿ “ಯಡಿಯೂರಪ್ಪ ಅಭಿಮಾನೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯಡಿಯೂರಪ್ಪನವರನ್ನು ಸನ್ಮಾನಿಸಿ, ಗೌರವ ಸಲ್ಲಿಸಲಿದ್ದಾರೆ. ತಮ್ಮ ನಾಯಕನ ಅಭಿಮಾನೋತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !