ಮಂಗೋಲಿಯನ್ನರಿಗೆ ಭಾರತದಿಂದ ʼಬುದ್ಧ ಪೂರ್ಣಿಮಾʼ ಉಡುಗೊರೆ: ಭಗವಾನ್ ಬುದ್ಧನ ಪವಿತ್ರ ವಸ್ತುಗಳು ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ-  ಮಂಗೋಲಿಯಾ ದೇಶಗಳ ನಡುವಿನ ಬಾಂಧವ್ಯ ಸುಧಾರಿಸುವಲ್ಲಿ ಐತಿಹಾಸಿಕ ಎನ್ನಬಹುದಾದ ಘಟನೆಯೊಂದು ಜರುಗುತ್ತಿದೆ. ಜೂನ್ 14 ರಂದು ಮಂಗೋಲಿಯಾದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುವ ಪವಿತ್ರಹಬ್ಬ ಬುದ್ಧ ಪೂರ್ಣಿಮಾಕ್ಕೆ ಭಾರತ ಮಹತ್ವಪೂರ್ಣ ಉಡುಗೊರೆಯೊಂದನ್ನು ರವಾನಿಸುತ್ತಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ನೇತೃತ್ವದ 25 ಸದಸ್ಯರ ನಿಯೋಗವು‌ ಭಗವಾನ್ ಬುದ್ಧನ ನಾಲ್ಕು ಪವಿತ್ರ ಅವಶೇಷಗಳನ್ನು ಪ್ರದರ್ಶಿಸಲು ಮಂಗೋಲಿಯಾಕ್ಕೆ ಕೊಂಡೊಯ್ಯಲಿದೆ.
ಜಗತ್ತಿನಲ್ಲಿರುವ ಭಗವಾನ್‌ ಬುದ್ಧರಿಗೆ ಸೇರಿದ 22 ಅವಶೇಷಗಳಲ್ಲಿ ನಾಲ್ಕು ಪ್ರಮುಖ ಅವಶೇಷಗಳು ಪ್ರಸ್ತುತ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿವೆ. ಈ ಅವಶೇಷಗಳು ಬೌದ್ಧಧರ್ಮಿಯರಿಗೆ ಅತ್ಯಂತ ಪವಿತ್ರವಾದವು. 1898 ಪತ್ತೆಯಾದ ಈ ವಸ್ತುಗಳು ಬಿಹಾರದ ಪ್ರಾಚೀನ ನಗರ ಕಪಿಲ ವಸ್ತು ವಿನಲ್ಲಿ ಬುದ್ಧನಿಗೆ ಸಂಬಂಧಿಸಿದವು ಎಂದು ನಂಬಲಾಗಿದೆ. ಅವುಗಳನ್ನು ‘ಕಪಿಲವಸ್ತು ಅವಶೇಷಗಳು’ ಎಂದು ಕರೆಯಲಾಗುತ್ತದೆ.
ಬೌದ್ಧ ಧರ್ಮಿಯರು ಹೆಚ್ಚಿರುವ ಮಂಗೋಲಿಯಾದ ಕೋರಿಕೆಯ ಮೇರೆಗೆ ಆ ದೇಶದಲ್ಲಿ ಪವಿತ್ರ ಅವಶೇಷಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ಸಮ್ಮತಿ ಸೂಚಿಸಿದೆ. ಕಿರಣ್‌ ರಿಜಿಜು ನೇತೃತ್ವದ ನಿಯೋಗ ಸೋಮವಾರ ಆವಶೇಷಗಳೊಂದಿಗೆ ಪ್ರಯಾಣಿಸಲಿದೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಗಂದನ್ ಮಠದ ಆವರಣದಲ್ಲಿರುವ ಬತ್ಸಗಾನ್ ದೇವಾಲಯದಲ್ಲಿ ಅವಶೇಷಗಳನ್ನು ಪ್ರದರ್ಶಿಸಲಾಗುತ್ತದೆ.
ಈ ಅವಶೇಷಗಳನ್ನು ಕೊನೆಯ ಬಾರಿಗೆ 2012 ರಲ್ಲಿ ಶ್ರೀಲಂಕಾದಲ್ಲಿ ಪ್ರದರ್ಶಿಸಲಾಗಿತ್ತು.  ಭಾರತ ಮತ್ತು ಮಂಗೋಲಿಯಾ ಸಂಬಂಧಗಳಲ್ಲಿ ಇದೊಂದು ಮೈಲಿಗಲ್ಲು ಎಂದು ಕರೆದಿರುವ ರಿಜಿಜು, ಇದು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!