ಹೊಸದಿಗಂತ ವರದಿ,ಮಡಿಕೇರಿ:
ಉದ್ಯಮಿ ರಮೇಶನನ್ನು ಕೊಲೆ ಮಾಡಿದ ಆರೋಪಿ, ತೆಲಂಗಾಣದ ಉಪ್ಪಲ್ ಠಾಣಾ ವ್ಯಾಪ್ತಿಯ ವಸತಿ ಗೃಹದಿಂದ ಕಳೆದ ಗುರುವಾರ ಬೆಳಗಿನ ಜಾವ ಪರಾರಿಯಾಗಿದ್ದ ಅಂಕುರ್ ರಾಣಾನನ್ನು ಮಂಗಳವಾರ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ತೆಲಂಗಾಣದಿಂದ ಪರಾರಿಯಾಗಿದ್ದ ಆರೋಪಿ ರಾಣಾನನ್ನು ಪೊಲೀಸರು ಜೈಪುರದಲ್ಲಿ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸುಂಟಿಕೊಪ್ಪ ಸಮೀಪದ ಪನ್ಯ ತೋಟದ ಮಾರಿಗುಡಿ ಬಳಿ ಕಾಫಿ ಗಿಡಗಳ ಮಧ್ಯದಲ್ಲಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಪುರುಷನೋರ್ವನ ಮೃತದೇಹ ಪತ್ತೆಯಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಕೊಲೆ ಪ್ರಕರಣವನ್ನು ಕೊಡಗು ಪೊಲೀಸರು ಚಾಣಕ್ಷತನದಿಂದ ಭೇದಿಸಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಕಳೆದ ಸೋಮವಾರ (ಅ. 28) ಇಬ್ಬರು ಆರೋಪಿಗಳಾದ ನಿಹಾರಿಕಾ ಹಾಗೂ ಅಂಕುರ್ ರಾಣಾ’ನನ್ನು ಸ್ಥಳ ಮಹಜರಿಗಾಗಿ ಬೆಂಗಳೂರು ಹಾಗೂ ತೆಲುಂಗಾಣಕ್ಕೆ ಕರೆದೊಯ್ದಿದ್ದರು.
ಸ್ಥಳ ಮಹಜರ್ ನಡೆಸಿ ಬುಧವಾರ ರಾತ್ರಿ ತೆಲಂಗಾಣದ ಉಪ್ಪಲ್ ಎಂಬಲ್ಲಿ ವಸತಿ ಗೃಹದಲ್ಲಿ ತಂಗಿದ್ದ ಸಂದರ್ಭ ಗುರುವಾರ ಬೆಳಗಿನ ಜಾವ ಗಂಟೆ ವೇಳೆಗೆ ಕೈಗೆ ಹಾಕಿದ್ದ ಕೋಳವನ್ನು ಸಡಿಲಿಸಿ ಮುಂಭಾಗದ ಕಿಟಕಿ ಮೂಲಕ ಅಂಕುರ್ ರಾಣಾ ತಪ್ಪಿಸಿಕೊಂಡಿದ್ದ.
ಈ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಕೊಡಗು ಪೊಲೀಸರು, ತೆಲಂಗಾಣದ ಪೊಲೀಸರ ಸಹಕಾರ ಪಡೆದುಕೊಂಡು ಆತನನ್ನು ಮಂಗಳವಾರ ಜೈಪುರದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರಗಳ ಹಿಂದೆ ವಿಚಾರಣೆ ಮುಗಿಸಿ ಮೂವರಲ್ಲಿ ಓರ್ವ ಆರೋಪಿ ಡಾಕ್ಟರ್ ನಿಖಿಲ್’ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಇನ್ನಿಬ್ಬರು ಆರೋಪಿಗಳಾದ ನಿಹಾರಿಕಾ ಹಾಗೂ . ಅಂಕುರ್ ರಾಣವನ್ನು ನ.4ರಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು. ಆದರೆ ಅಂಕುರ್ ರಾಣಾ ತಪ್ಪಿಸಿಕೊಂಡಿದ್ದರಿಂದ ನಿಹಾರಿಕಾಳನ್ನು ಮಾತ್ರ ಹಾಜರುಪಡಿಸಿ, ತೆಲಂಗಾಣದಲ್ಲಿ ನೀಡಲಾದ ದೂರಿನ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ತಪ್ಪಿಸಿಕೊಂಡಿದ್ದ ಆರೋಪಿಯನ್ನು ಕೂಡಲೇ ಬಂಧಿಸುವುದಾಗಿ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆರೋಪಿ ತಪ್ಪಿಸಿಕೊಂಡಿರುವ ಬಗೆ ನ್ಯಾಯಾಧೀಶರು ತೀವ್ರ ಸ್ವರೂಪದ ಆಕ್ಷೇಪವನ್ನು ವ್ಯಕ್ತಪಡಿಸಿ ಕೆಲವು ಹಿರಿಯ ಅಧಿಕಾರಿಗಳಿಗೆ ಕಾನೂನಿನಂತೆ ಶೋಕಾಸ್ ನೋಟಿಸನ್ನು ಜಾರಿಗೆ ಮಾಡಿರುವುದಾಗಿಯೂ ಹೇಳಲಾಗಿದೆ.
ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಬುಧವಾರ ಇಲ್ಲವೇ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.