ವರ್ಷಾಂತ್ಯಕ್ಕೆ ಭಾರತದ ಸ್ವಂತ 5ಜಿ ತಂತ್ರಜ್ಞಾನ ಸಿದ್ಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಅಂತ್ಯದಲ್ಲಿ ಭಾರತ ತನ್ನದೇ ಆದ ಸ್ವಂತ 5ಜಿ ತಂತ್ರಜ್ಞಾನ ಹೊಂದಿರಲಿದೆ ಎಂದು ಕೇಂದ್ರ ರೈಲ್ವೆ ಹಾಗೂ ಸಂವಹನ, ವಿದ್ಯುನ್ಮಾನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ತಾಜ್ ವೆಸ್ಟ್ ಎಂಡ್‌ನಲ್ಲಿ ಆರಂಭವಾದ ಇಂಡಿಯಾ ಫೌಂಡೇಶನ್‌ನ ವಾರ್ಷಿಕ ಇಂಡಿಯಾ ಐಡಿಯಾಸ್ ಕಾನ್ಕ್ಲೇವ್ (ಐಐಸಿ) ಏಳನೇ ಆವೃತ್ತಿಯ ಇಂಡಿಯಾ 2.0 ರಿಬೂಟಿಂಗ್ ಟು ಮೆಟಾ ಎರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಜಗತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿಯುವಾಗ ಸರಕಾರ, ಕೈಗಾರಿಕೆ ಯಾವುದೇ ಆಗಿದ್ದರೂ ನಾವು ಇಂದು ಕೆಲವೊಂದು ತಂತ್ರಜ್ಞಾನದಲ್ಲಿ ಮಾಸ್ಟರ್‌ಗಳಾಗಬೇಕು. ಟೆಲಿಕಾಂ ತಂತ್ರಜ್ಞಾನದಲ್ಲಿ ಕೇಂದ್ರ ನಮ್ಮದೇ ಆದ 4ಜಿ ಸ್ಟಾಕ್ ತಂತ್ರಜ್ಞಾನವನ್ನು ಹೊಂದಿದ್ದೇವೆ. ಬಿಎಸ್‌ಎನ್‌ಎಲ್ 2ಜಿಯಿಂದ ಆರಂಭಿಸಿ 3ಜಿ, 4ಜಿ ತಂತ್ರಜ್ಞಾನ ಹೊಂದಿದೆ. ನಾವು ಈ ತಂತ್ರಜ್ಞಾನವನ್ನು ಹೊರಗಿನಿಂದ ಪಡೆದಿಲ್ಲ, ದೇಶದಲ್ಲಿಯೇ ಅಭಿವೃದ್ಧಿ ಪಡಿಸಿ ಬಳಸುತ್ತಿದ್ದೇವೆ. ಈಗ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಈ ವರ್ಷಾಂತ್ಯಕ್ಕೆ ಅದು ಸಿದ್ಧವಾಗಲಿದೆ ಎಂದರು.
ಮುಂದಿನ 10 ವರ್ಷಗಳಲ್ಲಿ 85ಸಾವಿರ ಸೆಮಿಕಂಡಕ್ಟರ್ ಅಭಿವೃದ್ಧಿ ಪಡಿಸುವ ಕೌಶಲವಿರುವ ಜಗತ್ತಿನ ಏಕೈಕ ದೇಶ ಭಾರತ. ಇದಕ್ಕಾಗಿ ನಾವು ಐಐಟಿ, ಎನ್‌ಐಟಿ ಸಹಿತ ವಿವಿಧ ಜಾಗತಿಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಕಳೆದ ಐದು ವರ್ಷಗಳ ಬೆಳವಣಿಗೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಭಾರತ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಟ್ರಾನ್ಸ್‌ಮಿಷನ್ ಫೈಬರ್ ಬಳಸದೇ ಬೆಳಕು ಕೇಂದ್ರಿತವಾಗಿ ನಡೆಯಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಭಾರತ ವಿಜ್ಞಾನ ಮತ್ತು ಗಣಿತದ ತಾಯಿ, ಕಲೆ ಮತ್ತು ವೇದಗಳಿಗೆ ಅಜ್ಜಿಯ ಸ್ಥಾನದಲ್ಲಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆರೆತುಕೊಂಡಿದೆ. ನಾವು ಒಳ್ಳೆಯ ಯೋಚನೆಗಳನ್ನು ಎಲ್ಲ ಕಡೆಯಿಂದ ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫಾರಂನ ಅಧ್ಯಕ್ಷ ಜಾನ್ ಚೇಂಬರ್ಸ್ ಮತ್ತು ವಿಶ್ವ ಬ್ಯಾಂಕ್ ಉಪಾಧ್ಯಕ್ಷ ಜುನೈದ್ ಕಮಾಲ್ ಅಹ್ಮದ್ ವರ್ಚುವಲ್ ಮೂಲಕ ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!