ಕೂರ್ಗ್ ಬೈ ರೇಸ್ ಹೋರಾಟಕ್ಕೆ ಜಾತಿ-ರಾಜಕೀಯದ ಲೇಪನ ಬೇಡ: ಪ್ರವೀಣ್ ಉತ್ತಪ್ಪ

ಹೊಸ ದಿಗಂತ ವರದಿ, ಮಡಿಕೇರಿ:

‘ಕೂರ್ಗ್ ಬೈ ರೇಸ್’ ಹೋರಾಟಕ್ಕೆ ರಾಜಕೀಯ ಅಥವಾ ಜಾತಿಯ ಲೇಪನವನ್ನು ಹಚ್ಚಬೇಡಿ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ ತಿರುಗೇಟು ನೀಡಿದ್ದಾರೆ.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜರ ಕಾಲದಿಂದ ಹಿಡಿದು ಇಲ್ಲಿಯತನಕ ಕೊಡವರು ಸ್ವಾಮಿ ನಿಷ್ಟರಾಗಿದ್ದರೇ ಹೊರತು‌ ಎಲ್ಲಿಯೂ ಜಾತಿ ರಾಜಕೀಯ ಮಾಡಿದವರಲ್ಲ ಹಾಗೂ ರಾಜರಾಗಿಯೂ ರಾಜ್ಯಭಾರ ಮಾಡಿದವರಲ್ಲ, ಜಾತಿ ರಾಜಕೀಯ ಮಾಡಲೇಬೇಕು ಎಂದಿದ್ದರೆ, ಮಾಡಿ ತೋರಿಸುವಷ್ಟು ಜನ ಬೆಂಬಲ ಹಾಗೂ ಎದೆಗಾರಿಕೆಯೂ ಕೊಡವರಿಗೆ ಇದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ತಮ್ಮದೇ ಸಮುದಾಯದ ಚೇತನ್ ಎಂಬವರು ಕೋವಿ ವಿಷಯದಲ್ಲಿ ಕೇಸು ಹಾಕಿದಾಗ ನಿಮ್ಮ ಹೋರಾಟ ಎಲ್ಲಿ ಹೋಗಿತ್ತು? ಕೊನೆಗೆ ಹಿನ್ನಡೆಯಾದಾಗ ಕಣ್ಣೊರೆಸಲು ಅವರ ವಿರುದ್ಧ ಖಂಡನಾ ನಿರ್ಣಯದ ಸಭೆ ನಡೆಸಿ ಕೊಡವ ಹಾಗೂ ಅರೆಭಾಷಿಕ ಗೌಡರು ಒಂದಾಗಿ ಹೋಗಬೇಕು, ಚೇತನ್ ಅವರದ್ದು ಅವರ ವೈಯಕ್ತಿಕ ವಿಷಯ, ಅವರ ಕೇಸಿನ ವಿಷಯಕ್ಕೆ ಒಕ್ಕೂಟದ ಬೆಂಬಲವಿಲ್ಲ, ಒಕ್ಕೂಟ ಅವರ ನಿರ್ಧಾರವನ್ನು ಖಂಡಿಸುತ್ತದೆ ಎಂದವರು ಇದೀಗ ರಾಜಕೀಯ ಮಾಡುತ್ತಿರುವುದೇಕೆ‍ ಪ್ರಶ್ನಿಸಿದ್ದಾರೆ,
ಹಲವು ಊರು, ಕೇರಿ, ನಾಡುಗಳಲ್ಲಿ ಕೊಡವ ಹಾಗೂ ಅರೆಭಾಷಿಕ ಜನಾಂಗದ ನಡುವಿನ ಸಂಬಂಧ ಈಗಲೂ ಉತ್ತಮವಾಗಿಯೇ ಇದೆ. ಅವರವರ ಬಾಂಧವ್ಯಗಳನ್ನು ಒಡೆಯಲು ನಮ್ಮ ನಿಮ್ಮಂತಹ ಅಧ್ಯಕ್ಷರಿಂದ ಸಾಧ್ಯವಿಲ್ಲ. ಕೋವಿ ವಿಷಯದಲ್ಲಿ ಜಾತಿ ರಾಜಕೀಯವನ್ನು ಎಳೆದು ತಂದು ಕೊಡವ ಹಾಗೂ ಕೊಡವ ಭಾಷಿಕರ ನಡುವೆ ಹುಳಿ ಹಿಂಡಲು ಪ್ರಯತ್ನಿಸುತ್ತಿರುವ ನಿಮ್ಮ ಆಟ ಯಾವತ್ತೂ ಫಲಕಾರಿಯಾಗದು ಎಂದು ಪ್ರವೀಣ್ ಉತ್ತಪ್ಪ ಹೇಳಿದ್ದಾರೆ.
ಕೊಡವರಾಗಲಿ ಅಥವಾ ಕೊಡವ ಭಾಷಿಕ ಜನಾಂಗದವರಾಗಲಿ ಕಳೆದ 60 ವರ್ಷಗಳಿಂದ ಯಾವುದೇ ರಾಜಕೀಯ ಮೀಸಲಾತಿ ಸ್ಥಾನಮಾನವಿಲ್ಲದೆ, ಮೂಲಭೂತ ಸೌಲಭ್ಯವಿಲ್ಲದೆ ಕೇವಲ ಸ್ವಾಮಿ ನಿಷ್ಠೆಯಿಂದ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಮೀಸಲಾತಿ ತೆರವುಗೊಂಡು ಸಾಮಾನ್ಯ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಸಮಯದಲ್ಲಿ ಕೂಡಾ ಕೊಡವರಲ್ಲಿ ಶಾಸಕರಾಗುವ ಆರ್ಹತೆ ಇರುವವರು ಅನೇಕರಿದ್ದರೂ ಕಳೆದ 20 ವರ್ಷಗಳಿಂದ ಸುದೀರ್ಘವಾಗಿ ಗೌಡ ಜನಾಂಗದ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಂಡು ಬರಲಾಗುತ್ತಿದೆ. ನಮ್ಮ ಜನಾಂಗದ ಪ್ರತಿನಿಧಿ ಇದ್ದರೂ ಅವರನ್ನು ಸೋಲಿಸಿದವರು ಇದೇ ಕೊಡವರು ಎನ್ನುವುದನ್ನು ಮರೆಯಬಾರದು. ಹೀಗಿರುವಾಗ ಕೊಡವರಿಗೆ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ನೀವು ಇದೀಗ ತಾನೇ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಗೆಲುವಿನ ಅಂತರವನ್ನು ತೆಗೆದು ನೋಡಿ. ಅವರು ಯಾರಿಂದ ಗೆದ್ದಿದ್ದಾರೆ ಹಾಗೂ ಅಡ್ಡ ಮತದಾನ ಎಲ್ಲಾಗಿದೆ ಎಂದು ಗೊತ್ತಾಗುತ್ತದೆ ಎಂದೂ ಪ್ರವೀಣ್ ಉತ್ತಪ್ಪ ಕುಟುಕಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನಮ್ಮ ಮಾತೃ ಸಂಸ್ಥೆಯ ಅಧ್ಯಕ್ಷರ ಹೇಳಿಕೆಯನ್ನು ನೋಡಿ ಕಲಿಯಬೇಕಾದುದು ಬಹಳಷ್ಟಿದೆ, ಎಲ್ಲಿಯೂ ಯಾವ ಜನಾಂಗವನ್ನೂ ಬೊಟ್ಟು ಮಾಡದೆ ನಮ್ಮ ಹಕ್ಕನ್ನು ಅವರು ಪ್ರತಿಪಾದಿಸಿದ್ದಾರೆ. ಜಾತಿ, ಧರ್ಮಗಳ ನಡುವಿನ ಅನ್ಯೋನ್ಯತೆ ರಾಜಕೀಯವನ್ನು ಮೀರಿದ್ದು ಎನ್ನುವುದನ್ನು ಮರೆಯಬಾರದು. ನಿಮಗೆ ರಾಜಕೀಯ ಮಾಡಲೇಬೇಕು ಎಂದಾದರೆ ಅದಕ್ಕೂ ನಾವು ಸಿದ್ಧ ಎಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ಸವಾಲು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!