ಸಿಎಂ ಬೊಮ್ಮಾಯಿ ಪರ ಪ್ರಚಾರ: ನಟ ಸುದೀಪ್ ನಟನೆ ಸಿನಿಮಾ, ಟಿವಿ ಶೋ ಪ್ರಸಾರ ನಿಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ಸುದೀಪ್ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅವರು ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಶಿವಮೊಗ್ಗದ ವಕೀಲರೊಬ್ಬರು ಚುನಾವಣೆ ಆಯೋಗಕ್ಕೆ (Election Commission) ಪತ್ರ ಬರೆದಿದ್ದಾರೆ.
ಸುದೀಪ್ ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಅವರು ಮನವಿ ಪತ್ರ ಸಲ್ಲಿಸಿದ್ದಾರೆ.

ವಕೀಲರು ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ‘ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿವಿಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಹೀರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು’ ಎಂದು ಬರೆದಿದ್ದಾರೆ.

‘ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನಚಿತ್ರಗಳು ಮತ್ತು ಟಿವಿಶೋಗಳು ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಒತ್ತಾಯಿಸುತ್ತಿದ್ದೇನೆ’ ಎಂದು ಶಿವಮೊಗ್ಗದ ವಕೀಲರಾದ ಕೆ.ಪಿ ಶ್ರೀಪಾಲ್ (KP Shripal) ಎನ್ನುವವರು ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!