Friday, December 9, 2022

Latest Posts

ನವೆಂಬರ್‌ ತಿಂಗಳನ್ನು ʼರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸʼ ಎಂದು ಆಚರಿಸಲು ನಿರ್ಣಯಿಸಿದ ಕೆನಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇನ್ನು ಮುಂದೆ ಪ್ರತಿ ವರ್ಷದ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸʼವಾಗಿ ಆಚರಿಸಲು ಕೆನಡಾ ನಿರ್ಧರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಸನಾತನ ಧರ್ಮ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರ್ಥೈಸಿಕೊಳ್ಳುತ್ತಿರುವ ವಿದೇಶಿ ರಾಷ್ಟ್ರಗಳು ಹಿಂದೂ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಮತ್ತೊಂದು ವಿಶೇಷವೆಂದರೆ ಕೆನಡಾದ ಈ ನಿರ್ಧಾರ ಹಿಂದಿರುವುದು ಕನ್ನಡಿಗ ಸಂಸದ.
ಈ ಹಿಂದೆ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಹಿಂದೂ ಮಾಸವಾಗಿ ಆಚರಿಸುವ ನಿರ್ಣಯಕ್ಕೆ ಕೆನಡಾ ಸಂಸತ್ತಿನಲ್ಲಿ ಅಂಗೀಕಾರ ದೊರಕಿಸುವಲ್ಲಿ ಶ್ರಮವಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಚಂದ್ರ ಆರ್ಯ, ಪ್ರತಿ ವರ್ಷ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ’ ಎಂದು ಘೋಷಿಸಬೇಕು ಎಂಬ ನನ್ನ ಖಾಸಗಿ ನಿರ್ಣಯವನ್ನು ಕೆನಡಾದ ಸಂಸತ್‌ ಆದ ಹೌ ಸ್ ಆಫ್ ಕಾಮನ್ಸ್ ಸರ್ವಾನುಮತದಿಂದ ಅಂಗೀಕರಿಸಿದೆ. ಇದು ಹಿಂದೂ ಪರಂಪರೆಗೆ ಹಾಗೂ ನಮ್ಮ ದೇಶಕ್ಕೆ ಸಿಕ್ಕ ಮನ್ನಣೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಿಂದೂ-ಕೆನಡಿಯನ್ನರು ಕೆನಡಾದ ರಾಜಕೀಯ, ಸಾಮಾಜಿಕ, ಆರ್ಥಿಕತೆ, ವ್ಯಾಪಾರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ನೆರವಾಗಲಿದೆ ಎಂದು ಸಂಭ್ರಮಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಕೆನಡಾದ ನೇಪಿಯನ್ ಕ್ಷೇತ್ರದ ಸಂಸದರಾಗಿದ್ದಾರೆ.
ಮತ್ತೊಂದು ವಿಶೇಷವೆಂದರೆ ಕೆನಡಾದ ನೆರೆ ರಾಷ್ಟ್ರವಾದ ಅಮೆರಿಕದಲ್ಲಿ ಪ್ರತಿವರ್ಷದ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ ಮಾಡಲು 2021ರಲ್ಲಿ ನಿರ್ಣಯಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!