ಹೊಸದಿಗಂತ ವರದಿ,ಯಾದಗಿರಿ:
ಬೆಂಬಿಡದೆ ಕಾಡುತ್ತಿರುವ ಮಾಹಾಮಾರಿ ಕೊವಿಡ್-19 ಮತ್ತು ಒಮಿಕ್ರಾನ್ ತಳಿ ರೂಪಾಂತರಿಯ ವೈರಸ್ ನಿಯಂತ್ರಣಕ್ಕಾಗಿ ಮೈಲಾಪೂರಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಮತ್ತು ಇತರೆ ವಾಹನಗಳು ಬರದಂತೆ ತಡೆದು ವಾಪಸ್ ಕಳುಹಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ದೇವಸ್ಥಾನದ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವ ಮುಖಾಂತರ ಭಕ್ತಾದಿಗಳು ಕಾಣಿಕೆ ಕೊಡುವ ವಾಡಿಕೆ ಇರುವುದರಿಂದ ಚೆಕ್ ಪೋಸ್ಟ್ ನಲ್ಲಿಯೇ ಕುರಿಗಳನ್ನು ತಡೆದು ಸಂಗ್ರಹ ಮಾಡಿ ಭಕ್ತಾದಿಗಳಿಗೆ ರಸೀದಿ ಕೊಡಲು ಜಿಲ್ಲಾಧಿಕಾರಿ ಸೂಚಿಸಿದರು.
ಜಾತ್ರಾ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಮಾಡಿ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಿಬ್ಬಂದಿಗಳು ಕಾರ್ಯಪ್ರವೃತರಾಗಿ ಎಂದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ದೇವಸ್ಥಾನದಲ್ಲಿ ಸುಮಾರು 20 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾತ್ರಾ ಮಹೋತ್ಸವದಲ್ಲಿ ಜನದಟ್ಟಣೆ ಸೇರುವುದರಿಂದ ಗ್ರಾಮದ ಸುತ್ತಮುತ್ತಲೂ ಒಂದು (1)ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ ಅನ್ವಯಿಸುವಂತೆ ಭಾರತ ದಂಡ ಸಂಹಿತೆ 1973 ಕಲಂ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ದೇವಸ್ಥಾನಕ್ಕೆ ಸ್ಥಳೀಯ ಗ್ರಾಮಗಳಿಂದ ಬರುವ 50 ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಸರಳವಾಗಿ ಪೂಜಾವಿಧಾನ ಮಾಡಲು ಅವಕಾಶವಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಸಿ ಕೋವಿಡ್-19 ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಲು ಸಂಬಂಧಿಸಿದವರಿಗೆ ಸೂಚಿಸಿದರು.
ಚೆಕ್ ಪೋಸ್ಟ್ ಮಾತ್ರವಲ್ಲದೇ 100 ಮೀಟರ್ ಅಂತರದಲ್ಲಿಯೂ ಒಂದೊಂದು ಬ್ಯಾರಿಕೇಡ್ ಹಾಕಲಾಗಿದೆ. ಇಬ್ಬರು ಡಿವೈಎಸ್ಪಿ, 15 ಸಿಪಿಐ, 30 ಪಿಎಸ್ಐ ಹಾಗೂ 350 ಕ್ಕಿಂತ ಹೆಚ್ಚು ಪೊಲೀಸ್ ಕಾನಸ್ಟೇಬಲ್ ಮತ್ತು ಹೆಡ್ ಕಾನಸ್ಟೇಬಲ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮ್ಮ ಜಿಲ್ಲೆಯಿಂದ ಭಕ್ತಾದಿಗಳು ಬರದಂತೆ ತಡೆಯಲು ಮನವಿ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
ಧ್ವನಿವರ್ಧಕ ಬಳಸಿ ಸಾರ್ವಜನಿಕವಾಗಿ ಜಾತ್ರೆ ನಿಷೇಧದ ಕುರಿತು ಪ್ರಕಟಣೆ ಹೊರಡಿಸಿ ಎಂದು ತಹಶೀಲ್ದಾರಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ನಿರ್ಮೀತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.