ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾನುವಾರ ತಡರಾತ್ರಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರ ಪೈಕಿ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸರೋಜಿನಿ ಶೆಟ್ಟಿ ಮೃತಪಟ್ಟವರು. ಉಳಿದಂತೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ, ಸುಮಾರು 100 ಮೀಟರ್ ಕೆಳಗಿನ ಕಂದಕಕ್ಕೆ ಉರುಳಿ ಬಿದ್ದಿದೆ.
ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಪುಷ್ಪಾವತಿ ಆರ್.ಶೆಟ್ಟಿ ಸಹಿತ ಪುತ್ರಿ ಪೂರ್ಣಿಮಾ ಶೆಟ್ಟಿ ಮೊಮ್ಮಕ್ಕಳಾದ ಸಮೃದ್ಧ್ ಹಾಗೂ ಸಾಕ್ಷಿ ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ, ಚಾಲಕ ಅರುಣ್ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮ ಇವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಸರೋಜಿನಿ ಶೆಟ್ಟಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.
ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.