ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಭೀಕರ ಟೆಲಿಗ್ರಾಂ (Telegram) ಜಾಲವೊಂದನ್ನು ಜರ್ಮನ್ ಪೊಲೀಸರು ಪತ್ತೆಹಚ್ಚಿದ್ದಾರೆ. “ಜರ್ಮನ್ ಡ್ರೈವಿಂಗ್ ಸ್ಕೂಲ್ ಫಾರ್ ಎಕ್ಸ್‌ಪರ್ಟ್ಸ್” ಎಂಬ ಮುಗ್ಧ ಹೆಸರಿನಲ್ಲಿದ್ದ ಈ ಗ್ರೂಪ್, ವಾಸ್ತವದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಲಹೆ ಹಾಗೂ ತಂತ್ರಗಳನ್ನು ಹಂಚಿಕೊಳ್ಳುವ ಕ್ರಿಮಿನಲ್ ನೆಟ್‌ವರ್ಕ್ ಆಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಬಹಿರಂಗಪಡಿಸಿದ್ದಾರೆ.
ಕೋಡ್ ವರ್ಡ್ ಬಳಸಿ ವಿಕೃತಿ!
ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳಿಗೆ ಗ್ರೂಪ್ ಚಾಟ್‌ಗಳಲ್ಲಿ ಆಘಾತಕಾರಿ ಸತ್ಯಗಳು ಲಭ್ಯವಾಗಿವೆ. ಆರೋಪಿಗಳು ಮಹಿಳೆಯರನ್ನು ‘ಕಾರುಗಳು’ ಎಂದೂ, ಅವರಿಗೆ ನೀಡುವ ನಿದ್ರಾಜನಕ ಡ್ರಗ್ಸ್ ಅನ್ನು ‘ಇಂಧನ’ ಹಾಗೂ ಅತ್ಯಾಚಾರ ಎಸಗುವುದನ್ನು ‘ಡ್ರೈವಿಂಗ್’ ಎಂಬ ಕೋಡ್ ವರ್ಡ್‌ಗಳಿಂದ ಕರೆಯುತ್ತಿದ್ದರು. ಇಷ್ಟೇ ಅಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಲಿಪಶುಗಳನ್ನು ‘ಸತ್ತ ಹಂದಿಗಳು’ ಎಂದು ಅತ್ಯಂತ ಅಮಾನವೀಯವಾಗಿ ಉಲ್ಲೇಖಿಸುತ್ತಿದ್ದರು. ಗ್ರೂಪ್‌ನಲ್ಲಿ ಸಂತ್ರಸ್ತ ಮಹಿಳೆಯರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನೂ ಹಂಚಿಕೊಳ್ಳಲಾಗಿತ್ತು.
ಚೀನಾ ಮೂಲದ ಕಿರಾತಕರ ಕೃತ್ಯ?
ಈ ವಿಕೃತ ಜಾಲದ ಹಿಂದೆ ಪ್ರಮುಖವಾಗಿ ಚೀನಾ ಮೂಲದ ಪುರುಷರು ಇರುವ ಶಂಕೆ ವ್ಯಕ್ತವಾಗಿದೆ. ಜರ್ಮನಿಯಲ್ಲಿ ವಾಸಿಸುತ್ತಿರುವ ಚೀನೀ ಮೂಲದ ಮಹಿಳೆಯರನ್ನೇ ಇವರು ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ತನಿಖಾಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಸುಮಾರು ಎರಡು ಡಜನ್‌ಗೂ ಹೆಚ್ಚು ಟೆಲಿಗ್ರಾಂ ಚಾಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.



