SHOCKING| ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಿವಾಸದ ಗೇಟಿಗೆ ಡಿಕ್ಕಿ ಹೊಡೆದ ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಹಿಂದೆ ಭಾರತೀಯ ಮೂಲದ ಸಾಯಿ ವರ್ಷಿತ್ ಎಂಬ ಯುವಕ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಹತ್ಯೆ ಮಾಡಲು ಅಧ್ಯಕ್ಷರ ಭವನದ ಗೇಟ್‌ಗೆ ಟ್ರಕ್‌ನೊಂದಿಗೆ ನುಗ್ಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಾಯಿ ವರ್ಷಿತ್ ಗೆ ಹತ್ತು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆಯಂತೆ. ಬ್ರಿಟನ್‌ನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಗುರುವಾರ ಸಂಜೆ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್ ಗೇಟ್‌ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಭದ್ರತಾ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಆಕಸ್ಮಿಕವಾಗಿ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ತಕ್ಷಣ ಭದ್ರತಾ ಸಿಬ್ಬಂದಿ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಬೇರೆ ಯಾರಾದರೂ ಶಂಕಿತರಿರುವ ಬಗ್ಗೆ ತಪಾಸಣೆಯನ್ನೂ ನಡೆಸಲಾಗಿತ್ತು. ಘಟನೆ ನಡೆದಾಗ ಪ್ರಧಾನಿ ರಿಷಿ ಸುನಕ್ ತಮ್ಮ ಕಚೇರಿಯಲ್ಲಿದ್ದರು. ಘಟನೆಯ ಸ್ವಲ್ಪ ಸಮಯದ ನಂತರ, ರಿಷಿ ಸುನಕ್ ಬೇರೆ ಮಾರ್ಗದ ಮೂಲಕ ಕಚೇರಿಯನ್ನು ತೊರೆದರು.

ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಯಾವಾಗಲೂ ಬಿಗಿ ಭದ್ರತೆ ಇರುತ್ತದೆ. ರಕ್ಷಣಾ ವ್ಯವಸ್ಥೆಯ ಭಾಗವಾಗಿ ಬಲವಾದ ಕಬ್ಬಿಣದ ಗೇಟ್‌ಗಳನ್ನು ಸಹ ಅಳವಡಿಸಲಾಗಿದೆ. ಈಗ ಘಟನೆಗೆ ಕಾರಣರಾದ ವ್ಯಕ್ತಿಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!