ಇಂಗಾಲ ಮಾರುಕಟ್ಟೆ, ಕೈಗಾರಿಕೆಗಳಲ್ಲಿ ಹಸಿರು ಇಂಧನ- ಭಾರತದ ಇಂಧನ ಸಂರಕ್ಷಣೆ ಮಸೂದೆ ಏನೆಲ್ಲ ಮಾಡಹೊರಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತು ಇಂದು ಹವಾಮಾನ ವೈಪರೀತ್ಯಗಳಿಂದಾಗಿ ಹಲವು ತೊಂದರೆಗಳನ್ನು ಅನುಭವಿಸುತ್ತಿವೆ. ಪಳೆಯುಳಿಕೆ ಇಂಧನಗಳ ದಹನದಿಂದ ಹೊರಸೂಸುವ ಅಪಾಯಕಾರಿ ಅನಿಲಗಳು, ಹಸಿರು ಮನೆ ಪರಿಣಾಮ ಗಳಿಂದಾಗಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡಲು ಜಗತ್ತಿನ ಹಲವು ರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡಿವೆ. ಭಾರತವೂ ಕೂಡ ಹವಾಮಾನಗುರಿಗಳನ್ನು ಸಾಧಿಸಲು ಬದ್ಧವಿರುವುದಾಗಿ ಹೇಳಿದ್ದು ಈ ನಿಟ್ಟಿನಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆಗೊಳಿಸುವ ಉದ್ದೇಶದಿಂದ ಇಂಧನ ಸಂರಕ್ಷಣೆ ಮಸೂದೆ-2022 ಅನ್ನು ಪರಿಚಯಿಸಲಾಗಿದೆ.

ಇದು ದೇಶದಲ್ಲಿ ಇಂಗಾಲ ಮಾರುಕಟ್ಟೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದು ಪಳೆಯುಳಿಕೆ ಇಂಧನಗಳ ಬದಲಾಗಿ ಹಸಿರು ಹೈಡ್ರೋಜನ್, ಹಸಿರು ಅಮೋನಿಯಾ, ಬಯೋಮಾಸ್ ಮತ್ತು ಎಥೆನಾಲ್ ಸೇರಿದಂತೆಹಸಿರು ಇಂಧನಗಳ ಬಳಕೆಯನ್ನು ಕಡ್ಡಾಯಗೊಳಿಸುತ್ತೆ. ಈ ಹಿನ್ನೆಲೆಯಲ್ಲಿ ನೀವು ತಿಳಿದುಕೊಳ್ಳಬೇಕಿರೋ ಕೆಲ ಮಾಹಿತಿಗಳು ಇಲ್ಲಿವೆ.

ಇಂಗಾಲ ಮಾರುಕಟ್ಟೆ ಎಂದರೇನು ?
ಇಂಗಾಲ ಮಾರುಕಟ್ಟೆ ಎಂದರೆ ʼಕಾರ್ಬನ್ ಕ್ರೆಡಿಟ್‌ʼಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವ್ಯಾಪಾರ ವ್ಯವಸ್ಥೆಯಾಗಿದೆ. ಒಂದು ಕೈಗಾರಿಕೆಯು ಹೊರಸೂಸುವ ಇಂಗಾಲದ ಪ್ರಮಾಣದ ಮೇಲೆ ಈ ಕಾರ್ಬನ್‌ ಕ್ರೆಡಿಟ್‌ ಗಳನ್ನು ನಿರ್ಧರಿಸಲಾಗುತ್ತದೆ. ಸರ್ಕಾರವು ಒಂದು ಕೈಗಾರಿಕೆ ಅಥವಾ ಉದ್ದಿಮೆಯಿಂದ ಹೊರಸೂಸಬಹುದಾದ ಇಂಗಾಲದ ಪ್ರಮಾಣದ ಮೇಲೆ ಗರಿಷ್ಟ ಮಿತಿಯನ್ನು ವಿಧಿಸುತ್ತದೆ. ಒಂದು ಕೈಗಾರಿಕೆಯು ತನ್ನ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಗಾಲ ಹೊರಸೂಸಿದರೆ ಅದರ ಹೆಚ್ಚುವರಿ ಕ್ರೆಡಿಟ್‌ ಅನ್ನು ಆ ಕೈಗಾರಿಕೆಯು ಇನ್ನೊಂದು ಕೈಗಾರಿಕೆಗೆ ಅದನ್ನು ಮಾರಾಟ ಮಾಡಬಹುದಾಗಿದೆ.

ಆದ್ದರಿಂದ ಕಾರ್ಬನ್ ಕ್ರೆಡಿಟ್ ಒಂದು ನಿರ್ದಿಷ್ಟ ಪ್ರಮಾಣದ ಹಸಿರುಮನೆ ಅನಿಲ (GHG) ಹೊರಸೂಸುವಿಕೆಯನ್ನು ಉತ್ಪಾದಿಸಲು ವ್ಯಾಪಾರ ಮಾಡಬಹುದಾದ ಅನುಮತಿಯಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಈ ಮಾರುಕಟ್ಟೆಯಲ್ಲಿ ಭಾಗವಹಿಸಬಹುದು. ಭಾರತದಲ್ಲಿ ಗುಜರಾತ್‌ ಸರ್ಕಾರವು ಮೇ 2022ರಲ್ಲಿ ಮೊದಲ ಕಾರ್ಬನ್‌ ಮಾರುಕಟ್ಟೆಯನ್ನು ಸ್ಥಾಪಿಸಿದೆ. ಅಂತರಾಷ್ಟ್ರೀಯವಾಗಿಯೂ ವಿವಿಧ ದೇಶಗಳ ನಡುವೆ ಈ ಕಾರ್ಬನ್‌ ಕ್ರೆಡಿಟ್‌ ವಿನಿಮಯವಾಗುತ್ತದೆ. ಅಮೆರಿಕ, ಚೀನಾದಂತಹ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಕಾರ್ಬನ್‌ ಕ್ರೆಡಿಟ್‌ ಹೊಂದಿದೆ. ಅರ್ಥಾತ್‌ ಭಾರತದ ಕಾರ್ಬನ್‌ ಹೊರಸೂಸುವಿಕೆಯ ಪ್ರಮಾಣ ಕಡಿಮೆಯಿದೆ.

ಇಂಧನ ಸಂರಕ್ಷಣೆ ಮಸೂದೆ ಹೇಳುವುದೇನು ?
ಈ ಮಸೂದೆಯು ಪಳೆಯುಳಿಕೆ ಇಂಧನಗಳ ಬದಲಾಗಿ ಹಸಿರು ಇಂಧನಗಳ ಬಳಕೆಯನ್ನು ಕಡ್ಡಾಯ ಗೊಳಿಸುತ್ತದೆ. ಗಣಿಗಾರಿಕೆ, ಉಕ್ಕು, ಸಾರಿಗೆ ಮತ್ತು ವಾಣಿಜ್ಯ ಕಟ್ಟಡಗಳಂತಹ ಕೆಲವು ಗೊತ್ತುಪಡಿಸಿದ ಕೈಗಾರಿಕೆಗಳು ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ತಮ್ಮ ಶಕ್ತಿಯ ಬಳಕೆಯ ಕನಿಷ್ಠ ಪಾಲನ್ನು ಪೂರೈಸಬೇಕು ಎಂದು ಮಸೂದೆ ಉಲ್ಲೇಖಿಸುತ್ತದೆ. ಈ ಕಟ್ಟುಪಾಡುಗಳನ್ನು ಪೂರೈಸಲು ವಿಫಲವಾದರೆ ರೂ 10 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ. ಅಲ್ಲದೇ ಕೆಲ ದೊಡ್ಡ ಮಾಲಿನ್ಯಕಾರರು (ದೊಡ್ಡ ದೊಡ್ಡ ಕೈಗಾರಿಕೆಗಳು) ನವೀಕರಿಸಬಹುದಾದ ಮೂಲಗಳಿಂದ ತಮ್ಮ ಶಕ್ತಿಯ ಬಳಕೆಯ ಕನಿಷ್ಠ ಪಾಲನ್ನು ಪೂರೈಸಬೇಕಾಗುತ್ತದೆ.

ಈ ಮಸೂದೆಯ ಪ್ರಾಮುಖ್ಯತೆಯೇನು ?
ಭಾರತದ ತಲಾವಾರು ಇಂಗಾಲ ಹೊರಸೂಸುವಿಕೆಯ ಪ್ರಮಾಣ ಜಗತ್ತಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಆದರೆ ಭಾರತವು ಅಭಿವೃದ್ಧಿ ಹೊಂದುತ್ತಿರುವುದರಿಂದ ಈ ಪ್ರಮಾಣವು ಜಾಸ್ತಿಯಾಗುವ ನಿರೀಕ್ಷೆಗಳಿವೆ. ಹೀಗಾಗಿ ಆರ್ಥಿಕ ಚಟುವಟಿಕೆಯೊಂದಿಗೆ ಇಂಗಾಲದ ಹೊರಸೂಸುವಿಕೆಯನ್ನು ಸೀಮಿತಗೊಳಿಸುವ ಮತ್ತು ಸಮತೋಲನಗೊಳಿಸುವ ಕಾರ್ಯವಿಧಾನವನ್ನು ಭಾರತವು ಮುಂಚಿತವಾಗಿಯೇ ರಚಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಮಸೂದೆ ಅತ್ಯಂತ ಮಹತ್ವದ್ದಾಗಿದೆ.

ಅಲ್ಲದೇ ಕಳೆದ ವರ್ಷ ಗ್ಲಾಸ್ಗೋದಲ್ಲಿ ನಡೆದ COP-26 ನಲ್ಲಿ ಪ್ರಧಾನಿ ಮೋದಿಯವರು ಹೇಳಿದ “ಪಂಚಾಮೃತ” ಗುರಿಗಳ ಭಾಗವಾಗಿ, 2030 ರ ವೇಳೆಗೆ ತನ್ನ ಆರ್ಥಿಕತೆಯ ಇಂಗಾಲದ ತೀವ್ರತೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡಲು ಭಾರತವು ಈಗಾಗಲೇ ಬದ್ಧವಾಗಿದೆ. ಹಾಗಾಗಿ ಕಾರ್ಬನ್‌ ಹೊರಸೂಸುವಿಕೆಯನ್ನು ಮಿತಿಗೊಳಿಸಲು ಮತ್ತು ಭಾರತದ ಹವಾಮಾನ ಬದಲಾವಣೆಯ ನಿರೂಪಣೆಯನ್ನು ರೂಪಿಸುವ ನಿಟ್ಟಿನಲ್ಲಿ ಈ ಮಸೂದೆ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!