ದಾದಿ ಮೇಲೆ ನಾಯಿ ದಾಳಿ ಪ್ರಕರಣ: ಮಾಲಕರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಮಡಿಕೇರಿ:

ಕರ್ತವ್ಯನಿರತ ದಾದಿಯ ಮೇಲೆ ನಾಯಿ ದಾಳಿ ನಡೆಸಿದ‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಯ ಮಾಲಕರ‌ ವಿರುದ್ಧ‌ ಪ್ರಕರಣ ದಾಖಲಾಗಿದೆ.

ಬುಧವಾರ ನಾಪೋಕ್ಲು ಪೊಲೀಸ್‌ ಠಾಣೆ ವ್ಯಾಪ್ತಿಯ ಪಾರಾಣೆ ಕೊಣಂಜಗೇರಿ ನಿವಾಸಿ ಬೆಳ್ತಂಡ ಮಾಚಯ್ಯ ಅವರ ಮನೆಗೆ‌ ಮಗುವಿನ ಆರೋಗ್ಯ ತಪಾಸಣೆಗೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯಾ ಅವರ ಮೇಲೆ ಮಾಚಯ್ಯ ಅವರ ಮನೆಯ ಸಾಕು ನಾಯಿ ದಾಳಿ ಮಾಡಿತ್ತು. ಈ ಸಂದರ್ಭ ಭವ್ಯಾ ಅವರ ದೇಹದ‌ ಹಲವು ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದೀಗ ನಾಯಿಯ ಮಾಲಕರಾದ ಬೆಳ್ತಂಡ ಮಾಚಯ್ಯ ಅವರ ವಿರುದ್ಧ ಪ್ರಕರಣ‌ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ‌ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ಆರು ತಿಂಗಳ ಜೈಲು-ದಂಡ: ಸಾಕು ನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ, ಸಾಕು ನಾಯಿ ಮಾಲಕರ ಮೇಲೆ ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ 6 ತಿಂಗಳ ಜೈಲು ವಾಸ ಮತ್ತು ದಂಡ ವಿಧಿಸಲಾಗುವುದು ಎಂದು ರಾಮರಾಜನ್ ಅವರು ಎಚ್ಚರಿಸಿದ್ದಾರೆ.

ತಮ್ಮ ಮನೆಯ ಸಮೀಪ ನಾಯಿ ದಾಳಿ ಮಾಡಿರುವ ಘಟನೆಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!