‘ಇಡಿ’ಗೆ ಗೆಲುವುಕೊಟ್ಟ ರಾಜ್ಯದ ಮೊದಲ ಪ್ರಕರಣ: ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿಗೆ ಶಿಕ್ಷೆ!

ಹೊಸದಿಗಂತ ವರದಿ ಮಂಗಳೂರು:

ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೆ.ವಿ.ರಾಮಯ್ಯ ಎಂಬವರು 1978ರಿಂದ 2009ರವರೆಗೆ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ಆದಾಯಕ್ಕಿಂತ ಒಂದು ಕೋಟಿಗೂ ಅಧಿಕ ಸಂಪತ್ತು ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಆರೋಪಿ ಜೆ.ವಿ.ರಾಮಯ್ಯ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದರು. ಭ್ರಷ್ಟಾಚಾರಕ್ಕೆ ಸಹಕರಿಸಿದ ಹಿನ್ನೆಲೆಯಲ್ಲಿ ರಾಮಯ್ಯ ಅವರ ಪತ್ನಿ ಲಲಿತಮ್ಮ ಅವರಿಗೂ ಶಿಕ್ಷೆ ವಿಧಿಸಲಾಗಿದೆ. ಈ ಆರೋಪಿಗಳಿಗದೆ 3 ವರ್ಷ ಸಜೆ, 10,000 ದಂಡ ಮತ್ತು ಅವರು ಅಕ್ರಮವಾಗಿ ಗಳಿಸಿದ ಸುಮಾರು 70 ಲಕ್ಷಕ್ಕೂ ಮಿಗಿಲಾದ ಬೆಲೆಬಾಳುವ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಇದೊಂದು ಅಪರೂಪವಾದ ಪ್ರಕರಣವಾಗಿದ್ದು, ಕರಪ್ಷನ್ ಆಕ್ಟಿನಲ್ಲಿ ದಾಖಲಿಸಿದ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ದೂರಿನ್ವಯ ಶಿಕ್ಷೆಗೊಳಪಟ್ಟ ಕರ್ನಾಟಕದ ಪ್ರಪ್ರಥಮ ಪ್ರಕರಣ ಆಗಿದೆ. ಕರ್ನಾಟಕದಲ್ಲಿ ಈ ಕಾಯಿದೆ ಜಾರಿಗೆ ಬಂದ 17 ವರ್ಷದ ಅವಧಿಯಲ್ಲಿ ಆರೋಪಿಗಳ ವಿರುದ್ಧದ ದೂರು ಸಾಬೀತಾದ ಮೂರನೆಯ ಪ್ರಕರಣವಾಗಿದೆ. ಮಾತ್ರವಲ್ಲದೆ ದೇಶದಲ್ಲಿನ 24ನೇ ಪ್ರಕರಣವಾಗಿದೆ.
ಬೆಂಗಳೂರಿನ 24ನೇ ಸಿಬಿಐ ಕೋರ್ಟ್‌ನ ನ್ಯಾಯಾಧೀಶರಾದ ಎಚ್. ಎಂ. ಮೋಹನ್ ಅವರು ಶಿಕ್ಷೆ ವಿಧಿಸಿ ಆದೇಶ ಮಾಡಞಿದ್ದು, ಜಾರಿ ನಿರ್ದೇಶನಾಲಯದ ಪರವಾಗಿ ಇತ್ತೀಚೆಗಷ್ಟೇ ವಿಶೇಷ ಅಭಿಯೋಜಕರಾಗಿ ನೇಮಕಗೊಂಡ ಪುತ್ತೂರಿನವರಾದ ಕಜೆ ಲಾ ಚೇಂಬರ್ಸ್ ನ ಮುಖ್ಯಸ್ಥ ಮಹೇಶ್ ಕಜೆಯವರು ವಾದವನ್ನು ಮಂಡಿಸಿದ್ದರು.

ಏನಿದು ಪ್ರಕರಣ?
೨೦೦೯ರ ಪ್ರಕರಣ ಕೋಲಾರದ ಲೋಕಾಯುಕ್ತ ಕಚೇರಿಯಲ್ಲಿ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸಿ 2012ರಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ನಡುವೆ ಲೋಕಾಯುಕ್ತ ಇಲಾಖೆಯವರು ಜೆ.ವಿ. ರಾಮಯ್ಯ ಅವರು ಪಿ. ಎಂ. ಎಲ್. ಎ. (ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ )ನ ಅನ್ವಯವೂ ತಪ್ಪು ಎಸಗಿರುತ್ತಾರೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿಯನ್ನು ಕೂಡಾ ನೀಡಿದ್ದರು. ಸಮಗ್ರ ತನಿಖೆ ನಡೆದು ಒಂದನೇ ಆರೋಪಿ ರಾಮಯ್ಯ ಅಕ್ರಮವಾಗಿ ತನ್ನ ಆದಾಯದ ಮಿತಿಗಿಂತ ಹೆಚ್ಚಿನ ಗಳಿಕೆಯನ್ನು ಮಾಡಿ ಅದನ್ನು ತನ್ನ ಹೆಂಡತಿ ಮುಖಾಂತರ ವಿನಿಯೋಗಿಸಿ ಖರೀದಿಸಿದ ಸುಮಾರು ಆರು ಆಸ್ತಿಗಳನ್ನು ಜಪ್ತಿ ಮಾಡಿದ್ದರು. ಜಪ್ತಿಯಾದ ಆದೇಶದ ವಿರುದ್ಧ ದೆಹಲಿಯ ಎಜುಡಿಕೇಟಿಂಗ್ ಅಥಾರಿಟಿಯ ಮುಂದೆ ದೂರನ್ನು ಸಲ್ಲಿಸಿ ತದನಂತರ ಸದ್ರಿ ಮುಟ್ಟುಗೋಲಿನ ಆದೇಶವನ್ನು ಖಾಯಂಗೊಳಿಸಿದ್ದರು. ಮಾತ್ರವಲ್ಲದೆ ಮತ್ತೂ ತನಿಖೆಯನ್ನು ಮುಂದುವರಿಸಿ ಜಾರಿ ಮನಿ ಲಾಂಡ್ರಿಂಗ್ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅನ್ವಯ ಅಪರಾಧ ಎಸಗಿದ್ದಾರೆ ಎಂಬ ಕಾರಣಕ್ಕಾಗಿ ಮತ್ತು ಸದ್ರಿ ಆರೋಪಿಗಳು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಹಾಕಬೇಕೆಂದು ಕೋರಿ ಬೆಂಗಳೂರಿನ ಸಿ.ಬಿ.ಐ. ವಿಶೇಷ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದರು. ಇದೀಗ ಸಮಗ್ರ ವಿಚಾರಣೆ ನಡೆದು ತೀರ್ಪು ಹೊರಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!