ಆತಂಕ ಸೃಷ್ಟಿಸಿದ ಕಾಡಾನೆಗಳ ಹಿಂಡು: ತೋಟ-ಗದ್ದೆಯ ಬೆಳೆ ನಾಶ

ಹೊಸದಿಗಂತ ವರದಿ, ಮಡಿಕೇರಿ:
ಅಭ್ಯತ್’ಮಂಗಲ ವ್ಯಾಪ್ತಿಯಲ್ಲಿ ಹಾಡಹಗಲೇ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಬಹುತೇಕ ಗದ್ದೆಗಳು ಹಾಗೂ ತೋಟಗಳು ಆನೆಗಳ ದಾಳಿಗೆ ನಾಶವಾಗಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮರಿಯಾನೆಗಳೊಂದಿಗೆ ಗಂಡಾನೆ ಹಾಗೂ ಹೆಣ್ಣಾನೆ ಸಂಚರಿಸುತ್ತಿದ್ದು, ಮುಖ್ಯ ರಸ್ತೆಯ ಮೂಲಕ ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿವೆ. ಹೀಗೆ ಸಂಚರಿಸುವಾಗ ಮರಿಯಾನೆಗಳು ಕಣ್ಣಿಗೆ ಕಾಣದಾದಾಗ ಜೋರಾಗಿ ಘೀಳಿಡುವ ಕಾಡಾನೆಗಳು ಕೋಪದಿಂದ ತೋಟಗಳನ್ನು ನಾಶ ಮಾಡುತ್ತಿವೆ.
ಶುಕ್ರವಾರ, ಬೆಳೆಗಾರರಾದ ಅಂಚೆಮನೆ ಸುಧಿ ಹಾಗೂ ಆದರ್ಶ ಅವರುಗಳ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡು ಸಾಕಷ್ಟು ಹಾನಿ ಮಾಡಿದೆ. 15 ದಿನಗಳ ಹಿಂದೆಯಷ್ಟೇ ಭತ್ತದ ಬಿತ್ತನೆ ಮಾಡಿದ್ದು, ಮುಂದಿನ ವಾರ ನಾಟಿ ಮಾಡಲು ತಯಾರಿ ನಡೆಸುತ್ತಿರುವಾಗಲೇ ಎಲ್ಲವೂ ಆನೆಗಳ ಪಾಲಾಗಿದೆ.
ಅಂಚೆಮನೆ ಕುಟುಂಬಕ್ಕೆ ಸೇರಿದ ಕಾಫಿ ಮತ್ತು ಅಡಿಕೆ ತೋಟಕ್ಕೂ ಹಾನಿಯಾಗಿದ್ದು, ಅಡಿಕೆ ಗಿಡಗಳು ನೆಲಸಮವಾಗಿವೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಜೆಯಾಗುತ್ತಲೇ ರಸ್ತೆಗಳಲ್ಲಿ ಕಾಡಾನೆಗಳ ಹಿಂಡಿನ ಸಂಚಾರ ಹೆಚ್ಚಾಗಿ ಕಂಡು ಬರುತ್ತಿದ್ದು, ಶಾಲೆ ಬಿಟ್ಟು ಮನೆಗೆ ಬರುವ ಮಕ್ಕಳು ಹಾಗೂ ತೋಟದ ಕಾರ್ಮಿಕರು ಭಯಗೊಂಡಿದ್ದಾರೆ. ಅತ್ತಿಮಂಗಲದಿಂದ ಒಂಟಿಯಂಗಡಿವರೆಗೆ ವಿದ್ಯುತ್ ಕಂಬಗಳನ್ನು ಹಾಕಲಾಗಿದೆಯಾದರೂ ಬೀದಿದೀಪಗಳಿಲ್ಲ. ಕಾರ್ಗತ್ತಲಿನಲ್ಲಿ ಕಾಡಾನೆಗಳು ಸಂಚರಿಸುವಾಗ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಮತ್ತು ಗ್ರಾ.ಪಂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಅತಿಯಾದ ಮಳೆಯೊಂದಿಗೆ ಕಾಡಾನೆಗಳ ದಾಳಿಯೂ ನಿರಂತರವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ದಾಳಿಯಿಂದ ಉಂಟಾದ ನಷ್ಟದ ಬಗ್ಗೆ ವರದಿ ತಯಾರಿಸಿ ಸೂಕ್ತ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಅಲ್ಪಪ್ರಮಾಣದ ಪರಿಹಾರ ನೀಡಬಾರದೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ:
ಅಭ್ಯತ್ ಮಂಗಲಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗಟ್ಟುವ ಭರವಸೆ ನೀಡಿದ್ದು, ಹಾನಿಗೊಳಗಾದ ಗದ್ದೆ ಮತ್ತು ತೋಟವನ್ನು ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!