ಹೊಸದಿಗಂತ ವರದಿ ತುಮಕೂರು:
ತುಮಕೂರು ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಯಜಮಾನ ಬಸಪ್ಪ ನಿಧನರಾಗಿದ್ದಾರೆ. ಅವರ ನಿಧನದಿಂದ ಸಾರಂಗಿಪಾಳ್ಯ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
1920ರಲ್ಲಿ ತುಮಕೂರು ತಾಲೂಕಿನ ಸಾರಂಗಿಪಾಳ್ಯದ ಕಾಮಣ್ಣ–ಹನುಮಕ್ಕ ದಂಪತಿಯ ಹಿರಿಯ ಪುತ್ರರಾಗಿ ಜನಿಸಿದ್ದ ಬಸಪ್ಪ ಅವರು ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾಗಿದ್ದರು. ಬ್ರಿಟಿಷರ ವಿರುದ್ಧದ ವಿವಿಧ ಚಳವಳಿಗಳಲ್ಲಿ ಭಾಗವಹಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು.
ಇದನ್ನೂ ಓದಿ:
1934ರಲ್ಲಿ ಮಹಾತ್ಮ ಗಾಂಧೀಜಿ ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸಪ್ಪ ಅವರು ಭಾಗವಹಿಸಿದ್ದರು ಎನ್ನಲಾಗಿದೆ. ಗಾಂಧೀಜಿಯವರ ಸರಳತೆ ಹಾಗೂ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು, ಸ್ವಾತಂತ್ರ್ಯಾನಂತರವೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು.
ಗ್ರಾಮದ ಹಿರಿಯರಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಬಸಪ್ಪ ಅವರು ಯುವಜನರಿಗೆ ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಸೇವಾ ಮನೋಭಾವದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ನಿಧನಕ್ಕೆ ಗ್ರಾಮಸ್ಥರು ಹಾಗೂ ವಿವಿಧ ಮುಖಂಡರು ಸಂತಾಪ ಸೂಚಿಸಿದ್ದಾರೆ.



