ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಮಧ್ಯಪ್ರದೇಶದ 20 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಸಾಕ್ಷಿಯಾಗಿದ್ದಾನೆ. ಯುವಕ ತನ್ನ ಪರಿಸರ ಕಾಳಜಿಯಿಂದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದಾನೆ.
ಹಲವು ವರ್ಷಗಳಿಂದ ಮಾಲಿನ್ಯದಿಂದ ನಲುಗಿದ್ದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ಯುವಕ, ಜನರು ಕೈಬಿಟ್ಟಿದ್ದ ನದಿಯ ಕೆಲ ಭಾಗಗಳಿಗೆ ಮತ್ತೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ‘ಬಿಟ್ಟು ತಬಾಹಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಈ ಯುವಕನ ಪರಿಸರ ಸೇವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಬಿಟ್ಟು ತಬಾಹಿ’
ವರದಿಗಳ ಪ್ರಕಾರ, ‘ಬಿಟ್ಟು ತಬಾಹಿ’ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಯುವಕನ ನಿಜವಾದ ಹೆಸರು ಸುರೇಂದ್ರ ಸಿಂಗ್. ನದಿಯ ದುಸ್ಥಿತಿಯನ್ನು ಕಂಡು ಬೇಸರಗೊಂಡ ಅವರು, ಸರ್ಕಾರ ಅಥವಾ ಇತರರಿಗಾಗಿ ಕಾಯದೆ ಸ್ವತಃ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ಅಜನಾರ್ ನದಿಯ ಸ್ವಚ್ಛತೆಗೆ ಶ್ರಮಿಸಿದ್ದಾನೆ.
ಇದನ್ನೂ ಓದಿ:
ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಈ ಪ್ರಯತ್ನ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಜನರ ಗಮನ ಸೆಳೆಯಿತು. ನದಿ ಸ್ವಚ್ಛಗೊಳಿಸುವ ತಮ್ಮ ಕಾರ್ಯದ ವಿಡಿಯೋಗಳು ಮತ್ತು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವು ವ್ಯಾಪಕವಾಗಿ ವೈರಲ್ ಆಗಿವೆ. ಇದರಿಂದ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಮತ್ತಷ್ಟು ಚರ್ಚೆ ಆರಂಭವಾಗಿದೆ.
ಆನಂದ್ ಮಹೀಂದ್ರಾ ಮೆಚ್ಚುಗೆ
ಸುರೇಂದ್ರ ಸಿಂಗ್ ಅವರ ಈ ಪ್ರಯತ್ನಕ್ಕೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಸರಕ್ಕಾಗಿ ಯುವಕನೊಬ್ಬ ತನ್ನ ಸಮಯ ಮತ್ತು ಶ್ರಮವನ್ನು ಮೀಸಲಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.



