ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಒಟ್ಟು 43.81 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಇದುವರೆಗೆ 7.31 ಲಕ್ಷ ನೋಟಿಸ್‌ಗಳನ್ನು ಮತದಾರರಿಗೆತಲುಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಶುಕ್ರವಾರ ತಿಳಿಸಿದೆ.
ಮತದಾರರ ಪಟ್ಟಿಯಲ್ಲಿ ವಿಳಾಸದ ಮ್ಯಾಪಿಂಗ್ ಇಲ್ಲದಿರುವ ಮತ್ತು ಹೆಸರು ಅಥವಾ ವಿವರಗಳಲ್ಲಿ ವ್ಯತ್ಯಾಸಗಳಿರುವ ಮತದಾರರನ್ನು ಗುರುತಿಸಿ ಈ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಒಟ್ಟು ಸಿದ್ಧಪಡಿಸಲಾದ 43,81,143 ನೋಟಿಸ್‌ಗಳ ಪೈಕಿ 7,31,770 ವಿತರಣೆಯಾಗಿದ್ದು, ಇನ್ನುಳಿದ 36,49,371 ನೋಟಿಸ್‌ಗಳ ವಿತರಣೆ ಬಾಕಿ ಇದೆ.
ಒಟ್ಟು ಮತದಾರರ ಸಂಖ್ಯೆ
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 4,46,38,124 ಮತದಾರರಿದ್ದಾರೆ. ಇವರಲ್ಲಿ 2.21 ಕೋಟಿ ಪುರುಷರು, 2.24 ಕೋಟಿ ಮಹಿಳೆಯರು ಹಾಗೂ 2,871 ತೃತೀಯ ಲಿಂಗಿ ಮತದಾರರಿದ್ದಾರೆ.
ಸೆ. 19-20 ರಂದು ವಿಶೇಷ ಅಭಿಯಾನ
ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಚುನಾವಣಾ ನೊಂದಣಾಧಿಕಾರಿಗಳ (ERO) ಮುಂದೆ ಸೆಪ್ಟೆಂಬರ್ 3 ರಿಂದಲೇ ವಿಚಾರಣೆ ಆರಂಭವಾಗಿದ್ದು, ಅಕ್ಟೋಬರ್ 12 ರವರೆಗೆ ಮುಂದುವರಿಯಲಿದೆ. ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಹೆಸರನ್ನು ನೋಂದಾಯಿಸಲು ಸೆಪ್ಟೆಂಬರ್ 19 ಮತ್ತು 20 ರಂದು ಎರಡನೇ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಕೋರಿಕೆಯ ಮೇರೆಗೆ ನೋಟಿಸ್ ಪಡೆದವರ ಸಂಪೂರ್ಣ ಪಟ್ಟಿಯನ್ನು ಸೆಪ್ಟೆಂಬರ್ 6 ರೊಳಗೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ:
ಹೆಸರು ಕಾಣದಿದ್ದರೆ ಗಾಬರಿ ಬೇಡ
ಮತಗಟ್ಟೆಗಳ ಪುನರ್ರಚನೆ ಆಗಿರುವುದರಿಂದ ಈ ಹಿಂದೆ ಇದ್ದ ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆಗಳು ಬದಲಾಗಿವೆ. ಈ ಕಾರಣದಿಂದಾಗಿ ಹಲವು ಮತದಾರರಿಗೆ ತಮ್ಮ ಹಳೆಯ ಲಿಸ್ಟ್‌ನಲ್ಲಿ ಹೆಸರು ಕಾಣಿಸುತ್ತಿಲ್ಲ.
ಅಂತಹ ಮತದಾರರು ಆತಂಕಪಡದೆ, ತಮ್ಮ EPIC ಸಂಖ್ಯೆಯನ್ನು ಬಳಸಿ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in ಅಥವಾ ECINET ಮೊಬೈಲ್ ಆ್ಯಪ್ ಮೂಲಕ ತಮ್ಮ ಹೊಸ ಮತಗಟ್ಟೆಯ ವಿವರಗಳನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.



