ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಮನವಿಗೆ ಸ್ಪಂದಿಸಿದ ಕೇಂದ್ರ: ಸಚಿವೆ ಶೋಭಾ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾದ ನಾಡದೋಣಿ ಮೀನುಗಾರಿಕೆಗೆ ಹೆಚ್ಚುವರಿ ಸೀಮೆ ಎಣ್ಣೆಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆ ಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ, ಈ ಕುರಿತು ಕೇಂದ್ರ ಸರಕಾರದ ಗಮನವನ್ನು ಸೆಳೆದು ಹಂಚಿಕೆಯಾಗಿರುವ ಸೀಮೆ ಎಣ್ಣೆಯನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕು, ಈ ಮೂಲಕ ಕರಾವಳಿಯ ಮೀನುಗಾರರ ಹಿತವನ್ನು ಕಾಯಬೇಕು ಎಂದು ಉಡುಪಿಯ ಮೀನುಗಾರರ ಒಕ್ಕೂಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ, ಶೋಭಾ ಕರಂದ್ಲಾಜೆಯವರಿಗೆ ಮನವಿಯನ್ನು ಸಲ್ಲಿಸಿತ್ತು.

ರಾಜ್ಯದಲ್ಲಿ 10,100ಕ್ಕೂ ಅಧಿಕ ನಾಡದೋಣಿಗಳಿವೆ. ಇದು 60,000ಕ್ಕಿಂತಲೂ ಹೆಚ್ಚಿನ ಮೀನುಗಾರರ ಜೀವನಾಧಾರವಾಗಿದೆ, ಕೇಂದ್ರ ಸರಕಾರ ನೀಡುವ ಸೀಮೆ ಎಣ್ಣೆಯ ಮೇಲೆ ಈ ನಾಡದೋಣಿ ಮೀನುಗಾರಿಕೆಯು ಅವಲಂಬಿತವಾಗಿದೆ.

ಕರಾವಳಿಯ ಮೀನುಗಾರರ ಈ ಮನವಿಯನ್ನು ಕೇಂದ್ರ ಸಚಿವರು ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರ ಗಮನಕ್ಕೆ ತಂದು, ಅತೀ ಶೀಘ್ರದಲ್ಲಿ ಹೆಚ್ಚುವರಿ ಸೀಮೆ ಎಣ್ಣೆಯನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆಗೊಳಿಸಿ, ಕರಾವಳಿಯ ಮೀನುಗಾರರ ಹಿತವನ್ನು ಕಾಯುವಂತೆ ಕೇಳಿಕೊಂಡಿದ್ದರು.

ಕೇಂದ್ರ ಕೃಷಿ ರಾಜ್ಯ ಸಚಿವರ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಂದು ಕರ್ನಾಟಕ ಸರ್ಕಾರಕ್ಕೆ 2021-22ನೇ ಪಾಲಿನ 3540 ಕೆ.ಎಲ್. ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರ 2021-22ರ ಆರ್ಥಿಕ ವರ್ಷದಲ್ಲಿ 7080 ಕೆ.ಎಲ್. ಸೀಮೆ ಎಣ್ಣೆಯನ್ನು ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಬಿಡುಗಡೆ ಮಾಡಿತ್ತು. ಇದಕ್ಕೆ ಹೆಚ್ಚುವರಿಯಾಗಿ 3540 ಕೆ.ಎಲ್. ಸೀಮೆ ಎಣ್ಣೆಯನ್ನು ಇಂದು ಬಿಡುಗಡೆ ಮಾಡುವ ಮೂಲಕ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬೇಡಿಕೆಯನ್ನು ಈಡೇರಿಸಿದೆ.

ಈ ಹೆಚ್ಚುವರಿಯಾಗಿ ದೊರೆತಿರುವ ಸೀಮೆ ಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕೆ ರಾಜ್ಯದ ವಿತರಣಾ ವ್ಯವಸ್ಥೆಯು ವಿತರಿಸಲಿರುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯ ಸರಕಾರದ ಪ್ರಸ್ತಾವನೆ ಮತ್ತು ಕರಾವಳಿಯ ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ, ನಾಡ ದೋಣಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಿದ ಕೇಂದ್ರ ಸರಕಾರಕ್ಕೆ, ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!