ಕೇಂದ್ರ ಸರ್ಕಾರ ಸಿಎಂ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸಲು ಕಾಯುತ್ತಿದೆ: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್

 ಹೊಸದಿಗಂತ ವರದಿ, ಮೈಸೂರು:

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಜೈಲಿಗೆ ಕಳುಹಿಸಿದ ಕೇಂದ್ರದ ಬಿಜೆಪಿ ಸರ್ಕಾರ, ಸಿಎಂ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸಲು ಕಾಯುತ್ತಿದೆ ಎಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಆರೋಪಿಸಿದರು.

ಶುಕ್ರವಾರ ಮೈಸೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿಮಾತನಾಡಿದ ಅವರು, ಬಿಜೆಪಿ ತಮ್ಮ ವಿರೋಧಿಗಳನ್ನ ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಿದೆ. ಸಂಸದ ಪ್ರತಾಪ್ ಸಿಂಹ ನನ್ನನ್ನೂ ಜೈಲಿಗೆ ಕಳುಹಿಸುತ್ತೇನೆ ಅಂತ ಹೇಳ್ತಾರೆ. ಯಾವ ಕಾರಣಕ್ಕೆ ಅಂತ ಹೇಳಿ ಅಂದ್ರೆ ಹೇಳಲ್ಲ. ನಾನು ಯಾವತ್ತೂ ಜಾತಿ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಜನ ಸಾಮಾನ್ಯರಿಗೆ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ ಎಂದರು.

ಮೈಸೂರು -ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಇಷ್ಟ ಪಡುವ ಮತದಾರರೇ ಹೆಚ್ಚಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಇದು ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮೈಸೂರು ಜಿಲ್ಲೆ ಮತ್ತು ನಗರ ಕಾಂಗ್ರೆಸ್ ಅನ್ನು ಇತರೆ ಜಿಲ್ಲೆಗೆ ಹೋಲಿಕೆ ಮಾಡುವಾಗಿಲ್ಲ. ೧೧ ಕ್ಷೇತ್ರಗಳ ಪೈಕಿ ೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದ ಮೂರು ಕ್ಷೇತ್ರಗಳಲ್ಲೂ ಕಡಿಮೆ ಅಂತರದಿoದ ಸೋತಿದ್ದೇವೆ. ಜನರನ್ನ ದಿಕ್ಕು ತಪ್ಪಿಸಿ ಭಾವನಾತ್ಮಕ ವಿಚಾರ ಮುಂದಿಟ್ಟು ಬಿಜೆಪಿ ಕೆಲಸ ಮಾಡುತ್ತದೆ. ಸಿಎಂ ಸಿದ್ದರಾಮಯ್ಯ ತಂದ ಅನುದಾನವನ್ನ ನಾನು ಮಾಡಿದೆ ಎಂದು ಈಗಿನ ಸಂಸದರು ಓಡಾಡಿಕೊಂಡು ಬಂದರು. ಒಂದಷ್ಟು ಸುಳ್ಳನ್ನ ಸೃಷ್ಟಿ ಮಾಡಿ ಕೆಆರ್ ಎಸ್ ಕಟ್ಟಿದ್ದು ನಮ್ಮ ತಾತ ಅಂತಾನೇ ಸೃಷ್ಟಿ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಎಂ. ಪಿ ಗೆಲ್ಲಿಸಲಿಕ್ಕೆ ಆಗಲಿಲ್ಲ ಎಂದು ಮಾತನಾಡುತ್ತಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ನಮ್ಮನ್ನ ಸೋಲಿಸಿ ಮತ್ತೆ ಸಿದ್ದರಾಮಯ್ಯರಿಗೆ ಅವಮಾನ ಮಾಡಬೇಡಿ. ನನ್ನನ್ನ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯರಿಗೆ ಗೌರವ ಸಲ್ಲಿಸಿ. ಈ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಕೋಟೆ ಶಿವಣ್ಣ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಅಲ್ಪ ಸಂಖ್ಯಾತರ ಜಿಲ್ಲಾಧ್ಯಕ್ಷ ಮೋಸಿನ್ ಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!