ಹೊಸದಿಗಂತ ವರದಿ, ಮೈಸೂರು:
ಪ್ರಸ್ತುತ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಅದರಲ್ಲಿ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಹಿರಿಯ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಮತದಾನದ ಮೂಲಕ ಅಯ್ಕೆ ಮಾಡಬೇಕು ಮತ್ತು ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಗುರುವಾರ ರಾತ್ರಿ ತಮ್ಮನ್ನು ಭೇಟಿಯಾಗಿದ್ದರು.
ನಾನು ಸಂಸತ್ತಿಗೆ ೬ ಬಾರಿ ಆಯ್ಕೆಯಾಗಿದ್ದು, ಅದರಲ್ಲಿ ೪ ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದೆ. ವಿಧಾನ ಸಭೆಗೂ ಎರಡು ಬಾರಿ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾಗಿದ್ದೆ. ಡಾ.ಹೆಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬoಧವಿದೆ ಎಂದು ಹೇಳಿದರು. ತಾವು ರಾಜಕೀಯದಲ್ಲಿ ಅರ್ಧ ಶತಮಾನ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಕರೆ ಮಾಡಿ ಅಭಿನಂದಿಸಲಿಲ್ಲ ಎಂದು ತಿಳಿಸಿದರು.