August 13, 2026
Thursday, August 13, 2026
spot_img

ಓಲಾ, ಉಬರ್‌ಗೆ ಕೇಂದ್ರದ ಖಡಕ್ ಸೂಚನೆ: ರೈಡ್‌ಗೂ ಮುನ್ನ ಟಿಪ್ ಕೇಳಿದ್ರೆ ಹುಷಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಯಾಬ್ ಮತ್ತು ಆಟೋ ಬುಕ್ಕಿಂಗ್ ಸೇವೆ ಬಳಸುವ ಗ್ರಾಹಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದೆ. ಓಲಾ, ಉಬರ್ ಸೇರಿದಂತೆ ರೈಡ್-ಹೇಲಿಂಗ್ ಅಗ್ರಿಗೇಟರ್‌ಗಳು ಪ್ರಯಾಣ ಆರಂಭಕ್ಕೂ ಮುನ್ನ ಗ್ರಾಹಕರಿಂದ ಟಿಪ್ ಕೇಳುವ ಆಯ್ಕೆಯನ್ನು ನೀಡುವಂತಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಸ್ಪಷ್ಟಪಡಿಸಿದೆ.

ಪ್ರಯಾಣ ಮುಗಿದ ಬಳಿಕ ಮಾತ್ರ ಟಿಪ್

ಹೊಸ ಮೋಟಾರು ವಾಹನ ಸಂಯೋಜಕರ ಮಾರ್ಗಸೂಚಿಗಳು, 2025ರ ಅನ್ವಯ, ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಸಂದರ್ಭದಲ್ಲಿ ಮುಂಗಡವಾಗಿ ಟಿಪ್ ನೀಡುವ ಆಯ್ಕೆಯನ್ನು ಆ್ಯಪ್‌ಗಳಲ್ಲಿ ತೋರಿಸಬಾರದು. ಪ್ರಯಾಣ ಸಂಪೂರ್ಣಗೊಂಡ ನಂತರ ಮಾತ್ರ ಚಾಲಕರಿಗೆ ಟಿಪ್ ನೀಡುವ ಅವಕಾಶವನ್ನು ಪ್ರಯಾಣಿಕರಿಗೆ ನೀಡಬಹುದು.

Advance Tip ಆಯ್ಕೆಗೆ ಬ್ರೇಕ್

ಕೆಲವು ರೈಡ್‌ಹೇಲಿಂಗ್ ಆ್ಯಪ್‌ಗಳಲ್ಲಿ ಹೆಚ್ಚುವರಿ ಮೊತ್ತವನ್ನು ಮುಂಚಿತವಾಗಿ ಟಿಪ್ ರೂಪದಲ್ಲಿ ನೀಡಿದರೆ ರೈಡ್ ಬೇಗ ಸಿಗಬಹುದು ಅಥವಾ ಕಾಯುವ ಸಮಯ ಕಡಿಮೆಯಾಗಬಹುದು ಎಂಬ ರೀತಿಯ ಆಯ್ಕೆಗಳು ಕಾಣಿಸಿಕೊಂಡಿದ್ದವು. ಇಂತಹ ವ್ಯವಸ್ಥೆಯಿಂದ ಗ್ರಾಹಕರ ಮೇಲೆ ಹೆಚ್ಚುವರಿ ಹಣ ಪಾವತಿಸುವ ಒತ್ತಡ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ.

ಗ್ರಾಹಕರಿಗೆ ಒತ್ತಡ ಹೇರುವಂತಿಲ್ಲ

ಟಿಪ್ ನೀಡಿದರೆ ಮಾತ್ರ ಉತ್ತಮ ಸೇವೆ ಸಿಗುತ್ತದೆ, ರೈಡ್ ಶೀಘ್ರವಾಗಿ ದೃಢೀಕರಣವಾಗುತ್ತದೆ ಅಥವಾ ಚಾಲಕರು ರೈಡ್ ಸ್ವೀಕರಿಸುವ ಸಾಧ್ಯತೆ ಹೆಚ್ಚುತ್ತದೆ ಎಂಬ ಭಾವನೆ ಮೂಡಿಸುವ ಯಾವುದೇ ಡಿಜಿಟಲ್ ವಿನ್ಯಾಸವನ್ನು ಬಳಸಬಾರದು ಎಂದು ಸೂಚಿಸಲಾಗಿದೆ. ಇಂತಹ ಕ್ರಮಗಳು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ಸರ್ಕಾರ ಎಚ್ಚರಿಸಿದೆ.

ಇದನ್ನೂ ಓದಿ:

ಟಿಪ್ ಮೊತ್ತ ಸಂಪೂರ್ಣ ಚಾಲಕರಿಗೆ

ಪ್ರಯಾಣ ಮುಗಿದ ಬಳಿಕ ಪ್ರಯಾಣಿಕರು ತಮ್ಮ ಇಚ್ಛೆಯಂತೆ ನೀಡುವ ಟಿಪ್ ಮೊತ್ತದಲ್ಲಿ ಅಗ್ರಿಗೇಟರ್ ಸಂಸ್ಥೆಗಳು ಕಮಿಷನ್ ಅಥವಾ ಪ್ಲಾಟ್‌ಫಾರ್ಮ್ ಶುಲ್ಕ ಕಡಿತಗೊಳಿಸಬಾರದು. ಪ್ರಯಾಣಿಕರು ನೀಡಿದ ಮೊತ್ತ ಸಂಪೂರ್ಣವಾಗಿ ಚಾಲಕರಿಗೆ ತಲುಪಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಆ್ಯಪ್‌ಗಳ ಇಂಟರ್‌ಫೇಸ್ ಪರಿಶೀಲನೆ

ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ರೈಡ್ ಅಗ್ರಿಗೇಟರ್‌ಗಳು ತಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಿ, ಹೊಸ ನಿಯಮಗಳಿಗೆ ವಿರುದ್ಧವಾಗಿರುವ ವೈಶಿಷ್ಟ್ಯಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.

ಸರ್ಕಾರದ ಸಂದೇಶ ಸ್ಪಷ್ಟವಾಗಿದ್ದು, ಟಿಪ್ ಎನ್ನುವುದು ಚಾಲಕರ ಉತ್ತಮ ಸೇವೆಗೆ ಪ್ರಯಾಣಿಕರು ಸ್ವಯಂಪ್ರೇರಣೆಯಿಂದ ನೀಡುವ ಗೌರವಧನವಾಗಿರಬೇಕು; ರೈಡ್ ಪಡೆಯಲು ಮುಂಗಡವಾಗಿ ಪಾವತಿಸಬೇಕಾದ ಮೊತ್ತವಾಗಬಾರದು ಎಂಬ ನಿಲುವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !