ನಾಳೆಯಿಂದ ರಾಜ್ಯದಾದ್ಯಂತ ಸಿಇಟಿ ಪರೀಕ್ಷೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಾದ್ಯಂತ ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭವಾಗಲಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಮೇ 20 ಮತ್ತು 21 ರಂದು ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಈ ಬಾರಿ ಒಟ್ಟು 2,61,610 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಅಂದರೆ ಎಂದಿನಂತೆ ಈ ಬಾರಿಯೂ ರಾಜ್ಯದಲ್ಲಿ ಇಂಜಿನಿಯಂರಿಂಗ್ ಮುಂತಾದ ವೃತ್ತಿಪರ ಕೋರ್ಸ್​ಗಳಿಗಾಗಿ ಭಾರಿ ಪೈಪೋಟಿ ಇದೆ.

ಎಲ್ಲ ಕೇಂದ್ರಗಳಲ್ಲೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ನಾಳೆ ಬೆಳಿಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ, 21ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಮೇ 22ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಳಿಗ್ಗೆ 11.30 ರಿಂದ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ‌ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಇದರಲ್ಲಿ ಒಟ್ಟು 2,084 ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷಾ ಅಕ್ರಮ ತಡೆಗಟ್ಟಲು 592 ವೀಕ್ಷಕರು, 1,184 ಮಂದಿ ಇರುವ ವಿಶೇಷ ಸ್ಕ್ವಾಡ್‌, 592 ಕಸ್ಟೋಡಿಯನ್ಸ್ ಸೇರಿದಂತೆ ಒಟ್ಟು 23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!