ನಿಖಿಲ್ ಚಿಕ್ಕ ಹುಡುಗ, ದೊಡ್ಡ ದೊಡ್ಡ ಮಾತುಗಳನ್ನಾಡಬಾರದು: ಚಲುವರಾಯಸ್ವಾಮಿ

ಹೊಸದಿಗಂತ ವರದಿ, ಮದ್ದೂರು
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇನ್ನೂ ಚಿಕ್ಕ ಹುಡುಗ. ದೊಡ್ಡವರ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸಂಸದೆ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಮಾಡಿರುವ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರ ಕುಟುಂಬ ರಾಜಕೀಯ ಇತಿಹಾಸ ಹೊಂದಿದೆ. ತಾತ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದರು. ತಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಇಂತಹ ಕುಟುಂಬದ ವ್ಯಕ್ತಿ ದೊಡ್ಡವರ ಬಗ್ಗೆ ಮಾತನಾಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ನಿಖಿಲ್‌ಗೆ ರಾಜಕೀಯ ಅನುಭವದ ಕೊರತೆಯ ಜೊತೆಗೆ ದೊಡ್ಡವರ ಬಗ್ಗೆ ಹೇಗೆ ಮಾತನಾಡಬೇಕೆಂಬುದು ತಿಳಿದಿಲ್ಲ. ಮುಂದಾದರೂ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ಸಿನ ಪ್ರತಿಭಟನೆ ವೇಳೆ ಮಾಜಿ ಪ್ರಧಾನಿ ದೇವೇಗೌಡರ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಹಗುರವಾಗಿ ಮಾತನಾಡಿಲ್ಲ. ಹಿಂದಿನಿಂದಲೂ ಗೌಡರು ಹೋರಾಟಗಾರ ಎಂಬ ಕಾರಣಕ್ಕೆ ಅವರನ್ನು ಗೌರವಿಸಿಕೊಂಡು ಬರುತ್ತಿದ್ದೇವೆ. ಈಗಲೂ ದೇವೇಗೌಡರಿಗೆ ಹೋರಾಟದ ಶಕ್ತಿ ಇದೆ. ಕಾವೇರಿ ನೀರಿನ ರಕ್ಷಣೆ ಹೋರಾಟದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ 14 ಟಿ.ಎಂ.ಸಿ. ನೀರು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೆಲ್ಲವೂ ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಆದರೆ ಸುಖಾಸುಮ್ಮನೆಗೆ ಕಾಂಗ್ರೆಸ್ ಹೋರಾಟದಲ್ಲಿ ಅವರ ಹೆಸರು ತರುವುದು ಇಷ್ಟವಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.
ದೇವೇಗೌಡರು ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರಮೋದಿಯಿಂದ ಅನುದಾನ ಮಂಜೂರು ಮಾಡಿಸಿಕೊಳ್ಳುವ ಶಕ್ತಿ ಇದೆ. ಮೇಕೆದಾಟು ಯೋಜನೆ ವಿಚಾರದಲ್ಲೂ ದೇವೇಗೌಡರು ಯಾವುದೇ ಕಾರಣಕ್ಕೂ ಕಡೆಗಣಿಸಿಲ್ಲಘಿ. ಅವರ ಮೇಲೆ ಎಲ್ಲಾ ರಾಜಕೀಯ ಪಕ್ಷದ ನಾಯಕರೂ ಗೌರವ ಭಾವನೆ ಹೊಂದಿದ್ದೇವೆ ಎಂದು ಚಲುವರಾಯಸ್ವಾಮಿ ತಿಳಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!