ಸಾಹಿತಿಗಳ ವ್ಯಕ್ತಿತ್ವಕ್ಕೆ ‘ಚಂಪಾ’ ಮಾದರಿ: ಪ್ರೊ. ಸಿದ್ದು ಯಾಪಲಪರವಿ

ದಿಗಂತ ವರದಿ ಮಡಿಕೇರಿ:

ಸಾಹಿತಿಗಳ ವ್ಯಕ್ತಿತ್ವ ಹೇಗಿರಬೇಕೆಂಬುದಕ್ಕೆ ಚಂಪಾ ಅವರ ಬದುಕು ಮಾದರಿಯಾಗಿದ್ದು, ಅವರ ನಡೆ ಅನುಸರಿಸಿದರೆ ಗಟ್ಟಿ ಸಾಹಿತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಗದಗದ ಕೆ.ವಿ.ಎಸ್.ಆರ್ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿಯೂ ಆಗಿರುವ ಪ್ರೊ. ಸಿದ್ದು ಯಾಪಲಪರವಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ‌ ಆಯೋಜಿಸಲಾಗಿದ್ದ `ಚಂಪಾ ಒಂದು ನೆನಪು’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಸಾಹಿತ್ಯ ವಲಯದ ಶ್ರೇಷ್ಟ ಬರಹಗಾರರಾಗಿದ್ದ ಚಂದ್ರಶೇಖರ್ ಪಾಟೀಲ್ ಅವರು ಸಮಾಜಮುಖಿಯಾಗಿದ್ದರು. ಸಮಾಜದ ಬಗ್ಗೆ ಪೂರಕವಾಗಿ ಅವರ ಬರಹಗಳು ಮೂಡಿಬರುತ್ತಿದ್ದವು. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬಂದರೆ ಅದನ್ನು ಕಟುವಾಗಿ ವಿರೋಧಿಸುತ್ತಿದ್ದ ಧೈರ್ಯವಂತರಾಗಿದ್ದ ಚಂಪಾ ಅವರು, ಸಮಾಜದಲ್ಲಿ ಮುಕ್ತ ಹಾಗೂ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದ್ದರು. ಬರಹ ಹಾಗೂ ಮಾತಿನಲ್ಲಿ ಮಾರ್ಮಿಕವಾಗಿ ವ್ಯಕ್ತಿ ಹಾಗೂ ಸಮಾಜದ ತಪ್ಪು-ಸರಿಗಳನ್ನು ಹೇಳುತ್ತಿದ್ದ ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿತ್ವ ಅವರದಾಗಿತ್ತು. ಅವರ ಸ್ಥಾನಕ್ಕೆ ಘನತೆ ಬಾರದಂತೆ ಅವರು ಕೆಲಸ ಮಾಡಿದ್ದಾರೆ. ಅವಕಾಶವಾದಿಯಾಗಿರಲಿಲ್ಲ. ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಬೆಸೆದ ಹೆಗ್ಗಳಿಕೆ ಅವರದ್ದಾಗಿದೆ ಎಂದು ಹೇಳಿದರು.
ಚಂಪಾ ಎಂದರೆ ಜೀವನೋತ್ಸಹ, ವಿನೋದ ಪ್ರಜ್ಞೆ, ನೆಲದ ನುಡಿ ಹಾಗೂ ಧೈರ್ಯ ಎಂದು ಬಣ್ಣಿಸಿದ ಅವರು, ಕೊಡಗಿನ ಸಂಸ್ಕೃತಿ ಉಳಿಯಬೇಕು. ಪಶ್ಚಿಮಘಟ್ಟ ಸುರಕ್ಷಿತವಾಗಿದ್ದರೆ ಇಡೀ ಕರುನಾಡು ಸಮೃದ್ಧಿಯಾಗಿರುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಾಹಿತ್ಯ ಲೋಕದಲ್ಲಿ ಚಂಪಾ ಅಜರಾಮರವಾಗಿರುತ್ತಾರೆ. ಸಾಹಿತ್ಯ ಕ್ಷೇತ್ರದ ಘನತೆ ಹೆಚ್ಚಿಸಿದ ನೇರ ನುಡಿಯ ಸಾಹಿತಿಯಾಗಿದ್ದ ಚಂದ್ರಶೇಖರ್ ಪಾಟೀಲ್ ಅವರು ಬಂಡಾಯ ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಆನೇಕ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿ ದುಡಿದಿದ್ದಾರೆ. ಹಾಸ್ಯ, ವ್ಯಂಗ್ಯ, ವಿಡಂಬನೆ ಅವರ ಬರಹದಲ್ಲಿ ಅಡಕವಾಗಿತ್ತು ಎಂದು ಸ್ಮರಿಸಿದರು.
ಬಿ.ಆರ್. ಜೋಯಪ್ಪ ಬರೆದಿರುವ ಬದುಕು ಎಂಬ ಪರಿಸರ ಕಥನವನ್ನು ಬಿಡುಗಡೆ ಮಾಡಿ ಮಾತನಾಡಿದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂದಿ ಭಾಷಾ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಧರ್ ಹೆಗಡೆ, ಮುಂದಿನ ತಲೆಮಾರಿನ ಅಧ್ಯಯನಕ್ಕೆ ಈ ಪುಸ್ತಕವೊಂದು ದಾಖಲೀಕರಣವಾಗಲಿದೆ ಎಂದರು.
46 ಕಥನಗಳ ಸಂಕಲನ ಇದಾಗಿದ್ದು, ಸರಳ, ಸುಂದರವಾಗಿ ಮೂಡಿಬಂದಿದೆ. ಆದಿವಾಸಿಗಳ ಜೀವನ, ಪ್ರಕೃತಿ, ನಾಗರಿಕತೆ ಹೀಗೆ ವಿಭಿನ್ನ ಕೋನಗಳ ಬಗ್ಗೆ ಚಿಂತಿಸುವಂತೆ ಕೃತಿ ಮಾಡುತ್ತದೆ. ಹೊನ್ನ ಹಾಗೂ ಕಾಳಿ ಎಂಬ ಪಾತ್ರಗಳು ಓದುಗನನ್ನು ಹಿಡಿದಿಡುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದುಕು ಪುಸ್ತಕದ ಕೃತಿಕಾರ ಬಿ.ಆರ್. ಜೋಯಪ್ಪ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!