Wednesday, February 1, 2023

Latest Posts

ಕಿತ್ತೂರು ಗತವೈಭವ ತೆರೆದಿಟ್ಟ ’ಚನ್ನಮ್ಮ’ ನಾಟಕ: 15 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಂದ ವೀಕ್ಷಣೆ

-ಮಹಾಂತೇಶ ಕಣವಿ

ಧಾರವಾಡ:

ಇಡೀ ದೇಶವನ್ನೇ ಆಕ್ರಮಿಸಿದ ಬ್ರಿಟಿಷರ ಕಂಪನಿ ಸರ್ಕಾರದ ವಿರುದ್ಧ ಕತ್ತಿ ಝಳಪಿಸಿದ ಭಾರತೀಯ ವೀರ ನಾರಿಯರಲ್ಲಿ ’ಕಿತ್ತೂರು ಚನ್ನಮ್ಮ’ ಮೊದಲಿಗಳು. ಅವಳ ಹೋರಾಟ, ತ್ಯಾಗ, ಬಲಿದಾನ ಕರುನಾಡಿನ ಜನರಲ್ಲಿ ದೇಶಾಭಿಮಾನ ಮೂಡಿಸಿದೆ.

ಧಾರವಾಡ ರಂಗಾಯಣ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ 2 ದಿನ ಇಂಥ ವೀರವನಿತೆ ಚೆನ್ನಮ್ಮನ ಜೀವನಾಧಾರಿತ ’ಕಿತ್ತೂರು ಚನ್ನಮ್ಮ’ ಮೆಗಾ ನಾಟಕ ಪ್ರದರ್ಶನವು, ರಂಗದ ಮೇಲೆ ಅದ್ಭುತವಾಗಿ ಮೂಡಿಬಂತು.

ಕತ್ತಿ, ಗುರಾಣಿ, ಸಾವಿರಾರು ಕುದರೆಗಳು, ಒಂಟೆಗಳು, ದೊಡ್ಡ ಗಜಪಡೆ, ಕಿತ್ತೂರು ದೇಸಗತಿ ಸಂಸ್ಥಾನದ ಅಪ್ಪಟ ದೇಶಾಭಿಮಾನ, ಸಾಂಸ್ಕೃತಿಕ ವೈಭವ ತೆರೆದಿಡುವ ಮೂಲಕ ಈ ನಾಟಕವು ಕನ್ನಡಿಗರಲ್ಲಿ ಪುಳಕ ಹಾಗೂ ರೋಮಾಂಚನ ಉಂಟು ಮಾಡಿತು.

ನಾಟಕದ ರಂಗ ಸಜ್ಜಿಕೆ ಮೇಲೆ ನೂರಾರು ಕಲಾವಿದರು, ಉತ್ತಮ ಧ್ವನಿ, ಬೆಳಕು, ಸುಮಧುರ ಸಾಹಿತ್ಯ, ಸಂಗೀತದ ಜೊತೆಗೆ ಜೀವಂತ ಆನೆ, ಕುದರೆ, ಒಂಟೆಗಳು ರಾರಾಜಿಸುವ ಮೂಲಕ ಪ್ರೇಕ್ಷಕರನ್ನು ಗ್ಯಾಲರಿ ಬಿಟ್ಟು ಕದಲದಂತೆ ಹಿಡಿದಿಡುವಲ್ಲಿ ಯಶಕಂಡಿತು.

ಚನ್ನಮ್ಮನ ಜನನ, ತೊಟ್ಟಿಲೋತ್ಸವ, ನಾಮಕರಣ, ವಿವಿಧ ಕಲೆಗಳ ಅಧ್ಯಯನದ ನಂತರ ಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜ ದೇಸಾಯಿ 2ನೇ ಪತ್ನಿಯಾಗಿ ಸಂಸ್ಥಾನಕ್ಕೆ ಆಗಮನ, ಪ್ರೇಮ ಸಲ್ಲಾಪದ ನಂತರ ನಾಟಕವು ರೋಚಕ ತಿರುವು ಪಡೆಯಿತು.

ಸಂಪತ್ಭರಿತ ಕಿತ್ತೂರಿನ ಮೇಲೆ ಟಿಪ್ಟು, ಪೇಶ್ವೆಗಳ ಕೆಟ್ಟ ಕಣ್ಣು ಬಿದ್ದಿತು. ಮಲ್ಲರ್ಜನ ಬಂಧನ-ಬಿಡುಗಡೆ, ಸಾವಿನ ನಂತರ ರುದ್ರಮ್ಮನ(ಮಲ್ಲಸರ್ಜ ಮೊದಲ ಪತ್ನಿ)ಮಗ ಸವಾಯಿಸರ್ಜರುದ್ರನಿಗೆ ಸ್ವತಃ ಚನ್ನಮ್ಮ ಪಟ್ಟಾಭಿಷೇಕ ಕಟ್ಟಿದ ನಾಟಕ ಪುತ್ರ ಪ್ರೇಮ ಸಾಕ್ಷಿಕರಿಸತು.

ದೊರೆ ಮಲ್ಲಸರ್ಜ ದೇಸಾಯಿ ಹಾಗೂ ಯುವರಾಜ (ಚನ್ನಮ್ಮನ ಪುತ್ರ) ಶಿವಬಸವನ ಸಾವು, ಸವಾಯಿ ಮಲ್ಲಸರ್ಜನ ಆಡಳಿತದ ತಪ್ಪು ನೀತಿಗಳು ಮತ್ತು ಮಲ್ಲಪ್ಪ ಶೆಟ್ಟಿ ಬಣದ ರಾಜದ್ರೋಹದ ಕುತಂತ್ರದ ಹೀನ ಕೃತ್ಯಗಳು ಚನ್ನಮ್ಮನನ್ನು ಹಿಂಡಿ ಹಿಪ್ಪೆ ಮಾಡಿತು. ಇದರಿಂದ ಕಿತ್ತೂರು ಅವನತಿ ಹಾದಿ ಹಿಡಿಯಿತು.
ಮಗನ ಆಡಳಿತದಿಂದ ಬೇಸತ್ತ ರುದ್ರಮ್ಮ ಸಂಸ್ಥಾನ ತೊರೆದ ಬಳಿಕ ಶಿವಲಿಂಗ ರುದ್ರಸರ್ಜ ದತ್ತು ಪಡೆದ ಚೆನ್ನಮ್ಮ, ಸಂಸ್ಥಾನದ ಉಳಿವಿಗೆ ಗಂಡು ಉಡುಪು ತೊಟ್ಟು, ವೈರಿಗಳ ರುಂಡ ಚೆಂಡಾಡಲು ಕಾತರಳಾದಳು.
ದತ್ತಕ ಪುತ್ರ ಸುದ್ದಿ ಬ್ರಿಟಿಷ್ ಸರ್ಕಾರದ ಕಣ್ಣು ಕೆಂಪಾಗಿಸಿತು. ಇಲ್ಲಿಂದ ಬ್ರಿಟಿಷ್-ಚನ್ನಮ್ಮನ ಮಧ್ಯೆ ಯುದ್ಧ ಶುರುವಾಗಿ, ಮೊದಲ ಯುದ್ಧದಲ್ಲಿ ಥ್ಯಾಕರೆ ಸಾವನ್ನಪ್ಪಿ, ಕಿತ್ತೂರು ಸೈನ್ಯ ಜಯಿಸಿತು. ಎರಡನೇ ಯುದ್ಧದಲ್ಲಿ ಕಿತ್ತೂರು ಸೈನ್ಯ ಸೋಲು ಕಂಡಿತು.

ಚನ್ನಮ್ಮಾಜಿ ಸೆರೆಹಿಡಿದ ಗೃಹ ಬಂಧನದಲ್ಲಿ ಇರಿಸಿದ ನಂತರ ಅವಳ ಮಾನಸಪುತ್ರ ಸಂಗೊಳ್ಳಿ ರಾಯಣ್ಣ, ಬಾಳಪ್ಪ, ಬಸಪ್ಪ, ಯಲ್ಲಣ ಹೀಗೆ ಅನೇಕರು ಹೋರಾಟಕ್ಕೆ ಅಣಿಯಾದಾಗ ರಾಯಣ್ಣನ ಸೆರೆ, ಚನ್ನಮ್ಮ ಪ್ರಾಣ ತ್ಯಾಗದಿಂದ ನಾಟಕ ಅಂತ್ಯ ಕಾಣುತ್ತಿದೆ.

ಮೂರುವರೆ ಗಂಟೆಗಳ ಕಾಲ ಪ್ರೇಕ್ಷಕ ಮಹಾಶರನ್ನು ಹಿಡಿದಿಟ್ಟ ನಾಟಕವು, ವೀರಗಾಸೆ, ಕಂಸಾಳೆ, ಕರಡಿ ಮಜಲು, ಜಗ್ಗಲಿಗೆ ಮೇಳ, ಜಾನಪದ, ಸೋಬಾನೆ ಪದ, ಲಾವಣಿ ಹೀಗೆ ಹತ್ತಾರು ಕಲೆಗಳು ಕಿತ್ತೂರು ಸಂಸ್ಥಾನದ ಸಾಂಸ್ಕೃತಿಕ ವೈಭವನದತ್ತ ಬೆಳಕು ಚಲ್ಲಿತು.

15 ಸಾವಿರಕ್ಕೂ ಅಕ ಪ್ರೇಕ್ಷಕರು ಮೈಕೊರೆವ ಚಳಿ ಲೆಕ್ಕಿಸಿದೆ, ನಾಟಕ ವೀಕ್ಷಿಸಿದ್ದು ಅದರ ಯಶಸ್ವಿಗೆ ಹಿಡಿದ ಕೈಗನ್ನಡಿ. ಪ್ರೇಕ್ಷಕರ ಕಲಾಭಿರುಚಿ ಕಂಡ ನಿರ್ದೇಶಕರು ರಾಜ್ಯಾದ್ಯಂತ ಪ್ರದರ್ಶನ ನೀಡಿ, ಚನ್ನಮ್ಮನ ಸಾಹಸಗಾಥೆ ಕುರಿತು ಜನತೆಗೆ ಅರಿವು ಮೂಡಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!