Sunday, June 4, 2023

Latest Posts

ಇಬ್ಬರು ಮಹಿಳೆಯರಿಗೆ ವಂಚಿಸಿ, ಮೂರನೇ ಮದುವೆಯಾದ ವಕೀಲ!

ಹೊಸದಿಗಂತ ವರದಿ,ಮೈಸೂರು:

ವಕೀಲನೊಬ್ಬ ಒಂದೇ ವರ್ಷದಲ್ಲಿ ಮೂವರು ಮಹಿಳೆಯರನ್ನು ಮದುವೆ ಮಾಡಿ, ಮಕ್ಬಲ್ ಟೋಪಿ ಹಾಕಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ.
ಸಿ.ವಿ.ಸುನೀಲ್ ಕುಮಾರ್ ಎಂಬಾತನೇ ಮೂರು ಮದುವೆ ಆಗಿರುವ ಚಪಲ ಚನ್ನಿಗರಾಯ.
ಶಿವಮೊಗ್ಗದ ಸಾಗರ ತಾಲೂಕಿನ ಗ್ರಾಮವೊಂದರ 36 ವರ್ಷದ ಮಹಿಳೆಯೊಬ್ಬರನ್ನು ಭಾರತ್ ಮ್ಯಾಟ್ರೊಮೋನಿಯಲ್‌ನಲ್ಲಿ ಪರಿಚಯ ಮಾಡಿಕೊಂಡ ಈತ, 2020 ರ ಫೆಬ್ರವರಿ ತಿಂಗಳಲ್ಲಿ ಕೆ.ಆರ್.ನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ಆಗೋಣ ಎಂದು ಆಕೆಯನ್ನು ನಂಬಿಸಿದ್ದಾನೆ. ಅಷ್ಟೆ ಅಲ್ಲದೆ ಸುಳ್ಳು ಪ್ರಮಾಣ ಪತ್ರ ತೋರಿಸಿ, ಆ ಅಮಾಯಕ ಮಹಿಳೆಯನ್ನು ಯಾಮಾರಿಸಿದ್ದಾನೆ.
ಆಗ ಆಕೆ ನ್ಯಾಯ ಕೋರಿ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ಕೊಟ್ಟಿದ್ದಾಳೆ. ಅನಿವಾರ್ಯವಾಗಿ ಆಕೆಯನ್ನು 2020 ರ ಜೂನ್ 18 ರಂದು ಸರಳವಾಗಿ ಮದುವೆಯಾಗಿದ್ದಾನೆ.
ಆಕೆಯಿಂದ 5 ಲಕ್ಷ ಹಣ ಪಡೆದಿದ್ದನು. ಅಲ್ಲದೆ ಮತ್ತೊಂದು ಮದುವೆಯಾಗಲು ಸಮ್ಮತಿ ಸೂಚಿಸುವಂತೆ ಆಕೆಗೆ ಕಿರುಕುಳ ನೀಡಿದ್ದ. ಈ ಬಗ್ಗೆ ಆಕೆ ನವೆಂಬರ್ 10, 2020 ರಲ್ಲಿ ಕೆ.ಆರ್.ನಗರ ಪೋಲಿಸ್ ಸ್ಟೇಷನ್ ನಲ್ಲಿ ಸುನೀಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾಳೆ. ನಿರೀಕ್ಷಣಾ ಜಾಮೀನು ವಜಾಗೊಂಡ ಕಾರಣ ಮಾಡಿದ ತಪ್ಪಿಗೆ ಒಂದು ತಿಂಗಳು ಜೈಲು ವಾಸ ಕೂಡ ಅನುಭವಿಸಿ ಹೊರ ಬಂದಿದ್ದನು.
ಮೈಸೂರಿನ ಬಂಬೂ ಬಜಾರ್ ನ ಮಹಿಳೆಯೊಬ್ಬರನ್ನು ಕಳೆದ ಜುಲೈ 27 ರಂದು ಕೆ.ಆರ್.ನಗರದ ದೇವಸ್ಥಾನದಲ್ಲಿ ಮದುವೆಯಾದನು. ಮೊದಲ ಮದುವೆ ಮರೆ ಮಾಚಿ ಆ ಮಹಿಳೆಯ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದನು.
ಮೊದಲ ಮದುವೆಯಾಗಿರುವ ಒಡನಾಡಿ ಸಂಸ್ಥೆಯ ಪ್ರಮಾಣ ಪತ್ರ ಎರಡನೆ ಹೆಂಡತಿ ಕೈಗೆ ಸಿಕ್ಕಿಬಿಟ್ಟಿತು.
ಆಕೆ ಈ ಬಗ್ಗೆ ಪ್ರಶ್ನೆ ಮಾಡಿದಾಗ, ಮೊದಲ ಪತ್ನಿಗೆ 6 ಲಕ್ಷ ರೂಪಾಯಿ ಹಣ ಹಾಗೂ 120 ಗ್ರಾಂ ಚಿನ್ನ ಕೊಟ್ಟರೆ ಆಕೆ ಕೋರ್ಟ್ ಕೇಸ್ ವಾಪಾಸು ಪಡೆಯುತ್ತಾಳೆ. ಆಮೇಲೆ ನಾನು ನೀನು ಆರಾಮವಾಗಿ ಜೀವನ ಮಾಡಬಹುದು ಅಂತ ಬೆಣ್ಣೆ ಮಾತುಗಳನ್ನಾಡಿದ.
ಎರಡನೆ ಹೆಂಡತಿ ಇದಕ್ಕೆ ಒಪ್ಪದಿದ್ದಾಗ, ನೀನು ಹಣ ಹಾಗೂ ಚಿನ್ನಾಭರಣ ಕೊಡದಿದ್ದರೆ, ಮೊದಲ ಹೆಂಡತಿ ಜೊತೆಗೆ ಸಂಸಾರ ಮಾಡುತ್ತೇನೆ ಅಂತ ಬ್ಲಾ÷್ಯಕ್ ಮೇಲ್ ಮಾಡಿದ್ದ. ಆದರೆ ಆಕೆ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಇಬ್ಬರನ್ನು ಒಂದುಗೂಡಿಸುವ ಹಿರಿಯರ ರಾಜಿ ಪಂಚಾಯಿತಿ ವಿಫಲ ಆದಾಗ ಎರಡನೆ ಹೆಂಡತಿಯನ್ನು ತವರು ಮನೆಯಲ್ಲೆ ಬಿಟ್ಟಿದ್ದ.
ಬೆಂಗಳೂರಿನ ಶಾದಿ ಡಾಟ್ ಕಾಮ್ ಮೂಲಕ ಮತ್ತೊಬ್ಬ ಮಹಿಳೆಯನ್ನು ಪರಿಚಯ ಮಾಡಿಕೊಂಡು ಕಳೆದ, ಡಿಸೆಂಬರ್ 2 ರಂದು ಬೆಂಗಳೂರಿನಲ್ಲಿ 3 ನೇ ಮದುವೆಯಾಗಿದ್ದಾನೆ. ಅದು ಅಲ್ಲಿನ ಸಬ್ ರಿಜಿಸ್ಟಾರ್ ಆಫೀಸ್ ನಲ್ಲೆ ನೋಂದಾಯಿಸಿ ಮದುವೆಯಾಗಿದ್ದಾನೆ. ಅಲ್ಲದೇ ಮೊದಲ ಹೆಂಡತಿ ವಾಸವಿದ್ದ ಕೆ.ಆರ್.ನಗರಕ್ಕೆ 3 ನೇ ಹೆಂಡತಿಯನ್ನು ಕರೆದುಕೊಂಡು ಬಂದು ಸಂಸಾರ ಆರಂಭಿಸಿದ್ದಾನೆ.
ಕೆ.ಆರ್.ನಗರದ ಅರ್ಕನಾಥ ರೋಡ್‌ನಲ್ಲಿ ವಾಸವಿರುವ ಸುನೀಲ್ ಕುಮಾರ್ ವಿರುದ್ಧ ಮೊದಲ ಹಾಗೂ ಎರಡನೆ ಹೆಂಡತಿ ಕೆ.ಆರ್.ನಗರ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ಎರಡು ದೂರುಗಳನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!